ಪೆರ್ಲ: ಮುಳ್ಳೇರಿಯ ಹವ್ಯಕ ಮಂಡಲ ಸಭೆಯು ಪೆರ್ಲ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆ ಗೋಲೋಕದಲ್ಲಿ ಇತ್ತೀಚೆಗೆ ಜರಗಿತು.
ಧ್ವಜಾರೋಹಣ, ಶಂಕನಾದ, ಶ್ರೀಗುರುವಂದನೆ, ಶ್ರೀಕರಾವಲಂಬ ಸ್ತೋತ್ರ ಪಾರಾಯಣದೊಂದಿಗೆ ಸಭೆಯು ಪ್ರಾರಂಭವಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮುಳ್ಳೇರಿಯಾ ಮಂಡಲ ಅಧ್ಯಕ್ಷ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತ್ತೂಈಊಚೆಗೆ ಕೃಷ್ಣಕ್ಯರಾದ ಹಿಂದೂ ಸಮಾಜದ ಶ್ರೇಷ್ಠ ಸಂತ, ಶ್ರೀ ರಾಮಚಂದ್ರಾಪುರ ಮಠದ ಶ್ರೇಯೋಕಾಂಕ್ಷಿಯೂ ಆಗಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಬಾಷ್ಪಾಂಜಲಿ ಹಾಗೂ ರಾಮತಾರಕ ಮಂತ್ರ ಪಠಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು. ಜೊತೆಗೆ ಪೆರಡಾಲ ವಲಯದ ಮಿಂಚಿನಡ್ಕ ಚೈತನ್ಯ ಕೃಷ್ಣ ಹಾಗೂ ತಲ್ಪನಾಜೆ ಗೋವಿಂದ ಭಟ್ ಇವರು ನಿಧನರಾದ ಪ್ರಯುಕ್ತ ಸಂತಾಪ ಸೂಚಿಸಿ ರಾಮತಾರಕ ಜಪ ನಡೆಸಲಾಯಿತು.
ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಗತಸಭೆಯ ವರದಿಯನ್ನು ವಾಚಿಸಿ ಸಾಮಾರಂಭ ನಿರ್ವಹಣೆ ಮಾಡಿದರು. ಹರಿಪ್ರಸಾದ ಪೆರ್ಮುಖ ಆಯವ್ಯಯ ಮಂಡಿಸಿದರು. ಮಂಡಲದ ವಿವಿಧ ವಿಭಾಗಗಳ ಪದಾಧಿಕಾರಿಗಳು ಆಯಾ ವಿಭಾಗ ಮಾಹಿತಿ ನೀಡಿದರು. ವಿವಿಧ ವಲಯಗಳ ಕಾರ್ಯದರ್ಶಿಗಳು ವಲಯಗಳಲ್ಲಿ ನಡೆದ ಚಟುವಟಿಕೆಗಳ ವಿವರಗಳನ್ನು ನೀಡಿದರು. ವಿದ್ಯಾರ್ಥಿವಾಹಿನಿ ವಿಭಾಗ ವತಿಯಿಂದ ಶ್ರೀಗುರುಗಳಿಂದ ಅನುಗ್ರಹೀತವಾದ ವಿದ್ಯಾರ್ಥಿ ಸಹಾಯಧನ ಚೆಕ್ ವಿತರಣೆ ನಡೆಸಲಾಯಿತು. ಅಮೃತಧಾರಾ ಗೋಶಾಲೆಯ ಮುಖ್ಯಸ್ಥ ಜಗದೀಶ್ ಮಾತನಾಡಿ, ಗೋ ಶಾಲೆಯ ಚಟುವಟಿಕೆಗಳ ವಿವರ, ಮುಂದಿನ ಯೋಜನೆಯ ಬಗ್ಗೆ ಮಾಹಿತಿಗಳನ್ನಿತ್ತರು.
ಶ್ರೀ ಮಠದ ಸಮರಸ ಯೋಜನೆಯ ಕುರಿತಾಗಿ ಸಂಚಾಲಕ ರಾಜಗೋಪಾಲ ಕೈಪ್ಪಂಗಳ ಮಾಹಿತಿಗಳನ್ನು ನೀಡಿದರು. ದೀಪಕಾಣಿಕೆ, ಬಿಂದು ಸಿಂಧು, ಮುಷ್ಠಿ ಭಿಕ್ಷೆ, ಮಾತೃತ್ವಂ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನು ಸಭೆಯಲ್ಲಿ ವಿತರಿಸಲಾಯಿತು. ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಮಾತನಾಡಿ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠ, ಮನೆಹಣ, ಬೆಳೆ ಸಮರ್ಪಣೆ, ಮಾಣಿಮಠದ ವಾರ್ಷಿಕೋತ್ಸವ, ಶಿಷ್ಯಸಮಾವೇಶದ ಇವುಗಳ ಕುರಿತು ಸಮಗ್ರ ಮಾಹಿತಿಗಳನ್ನಿತ್ತರು. ಶ್ರಿ ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಸಂಪನ್ನಗೊಂಡಿತು.