ಬದಿಯಡ್ಕ: ಸಮಾಜದ ಎಲ್ಲಾ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ನೋಡುವ, ಸತ್ಪಥದ ಮಾರ್ಗಗಳ ಬೆಳಕನ್ನು ತೋರಿಸುವ ಶಕ್ತಿ ಸಾಹಿತ್ಯದ ಮೇರುತ್ವವಾಗಿದೆ. ಕಾವ್ಯಗಳು ಭಾವನೆಗಳ ಸಾಂಧ್ರರೂಪವಾಗಿದ್ದು, ಸಹಜ ಕ್ರಿಯೆಯಾಗಿದೆ ಎಂದು ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ಕೃಷ್ಣ ಭಟ್ ಕೋರಿಕ್ಕಾರು ಅವರ ಚೊಚ್ಚಲ ಕವನ ಸಂಕಲನ ಹೊಂಗಿರಣ ಕೃತಿಯನ್ನು ಮಂಗಳವಾರ ಅಪರಾಹ್ನ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವರ್ತಮಾನದಲ್ಲಿ ನಿಂತು ನಿನ್ನೆ ಮತ್ತು ನಾಳೆಗಳನ್ನು ಅಕ್ಷರ ಶಿಲ್ಪಗಳ ಮೂಲಕ ಪ್ರತಿಬಿಂಬಿಸುವ ಯತ್ನದಲ್ಲಿ ಕವಿ, ಚಿಕಿತ್ಸಕ ಮನೋಭೂಮಿಕೆಯಲ್ಲಿ ಸತ್ಯವನ್ನಷ್ಟೆ ಹೇಳಬಲ್ಲ. ಈ ಹಿನ್ನೆಲೆಯಲ್ಲಿ ಕೃಷ್ಣ ಭಟ್ ಅವರ ಹೊಂಗಿರಣ ಕೃತಿಯು ಉದಯ ಕಾಲದಿಂದ ಮುಸ್ಸಂಜೆವರೆಗಿನ ಧನಾತ್ಮಕ, ಬೇಸಗೆಯಿಂದ ಬೆಂಕಿಯ ತನಕದ ಋಣಾತ್ಮಕ ಅಂಶಗಳನ್ನೂ ಪ್ರತಿಬಿಂಬಿಸಿರುವುದು ಕುತೂಹಲ ಮೂಡಿಸುತ್ತಿದೆ ಎಂದರು. ಚಿಂತನೆಗೆ ಹಚ್ಚುವ, ಪ್ರಪಂಚವನ್ನು ಹೆಚ್ಚು ಪ್ರೀತಿಸುವ, ತಪ್ಪು-ಒಪ್ಪುಗಳನ್ನು ಪರಾಮರ್ಶಿಸುವ ಹೊಂಗಿರಣ ಕವನ ಸಂಕಲನ ಗಡಿನಾಡಿನ ಇತ್ತೀಚಿನ ಅತ್ಯುತ್ತಮ ಕೃತಿಯಾಗಿ ರೂಪುಗೊಂಡಿದೆ ಎಂದು ಅವರು ಈ ಸಂದರ್ಭ ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಅವರು ಮಾತನಾಡಿ, ಅವಿನಾಶಿಯಾದ ಅಕ್ಷರ ಸಂಪತ್ತಿನ ಒಡೆಯರಾಗಲು ಪ್ರತಿಯೊಬ್ಬರೂ ಹಾತೊರೆಯಬೇಕು. ಸಾಹಿತ್ಯ, ಕಲಾ ಪ್ರಪಂಚದ ತೊಡಗಿಸುವಿಕೆಯಿಂದ ಜೀವನದ ಪರಿಪೂರ್ಣತೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕವಿ, ಕಲಾವಿದರಿಂದ ಸಮಾಜೋನ್ನತಿ ಸಾಧ್ಯವಾಗುತ್ತದೆ. ಎಲ್ಲರೊಂದಿಗೆ ಬೆರೆಯುವ, ಬಂದಂತೆ ಸ್ವೀಕರಿಸುವ ಮನೋಸ್ಥಿತಿ ಕವಿಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ, ಹಿರಿಯ ಸಹಕಾರಿ ಕೋರಿಕ್ಕಾರು ವಿಷ್ಣು ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸದುದ್ದೇಶದ, ಉತ್ತಮ ಸಂದೇಶಗಳನ್ನು ನೀಡಿ ಚಿಂತನೆಗೆ ಹಚ್ಚುವ ಬರಹಗಳು ಇಂದಿನ ಸಮಾಜಕ್ಕೆ ಅಗತ್ಯ ಇದೆ. ತಂತ್ರಜ್ಞಾನ, ಸೌಕರ್ಯಗಳ ಏರುಹೊತ್ತಿನ ಇಂದು ಹೊಸ ತಲೆಮಾರು ಪುಸ್ತಕಗಳ ಓದು-ಬರವಣಿಗೆಯಲ್ಲಿ ಆಸಕ್ತಿ ವಹಿಸದಿರುವುದು ಖೇದಕರ. ಈ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸುವ ಕಾರ್ಯಚಟುವಟಿಕೆಗಳು ನಿತ್ಯನಿರಂತರವಾಗಿ ನಡೆಯುತ್ತಿರಬೇಕು ಎಂದು ಕರೆನೀಡಿದರು.
ನಿವೃತ್ತ ಚಿತ್ರಕಲಾ ಶಿಕ್ಷಕ, ಸಾಹಿತಿ ಬಾಲ ಮಧುರಕಾನನ ಹಾಗೂ ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು. ಕೃತಿಕರ್ತೃ ಕೃಷ್ಣ ಭಟ್ ಕೋರಿಕ್ಕಾರು ಉಪಸ್ಥಿತರಿದ್ದು, ಕೃತಿ ಮೂಡಿಬಂದ ಬಗೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ಕೃಷ್ಣ ಭಟ್ ಕೋರಿಕ್ಕಾರು ದಂಪತಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಬೆಂದ್ರೋಡು ಗೋವಿಂದ ಭಟ್ ಅವರಿಂದ ಕಾವ್ಯ ಗಾಯನ, ಪುಟಾಣಿಗಳಾದ ಕು.ರಕ್ಷಾ ಕೆ.ಭಟ್, ಶ್ರೀಜಾ ಭಟ್, ಹರ್ಷಿಣಿ ಕಡಪ್ಪು ತಂಡದವರಿಂದ ನೃತ್ಯ ಸಿಂಚನ ಪ್ರಸ್ತುತಿಗೊಂಡಿತು. ರಕ್ಷಾ ಕೆ.ಭಟ್ ಪ್ರಾರ್ಥಿಸಿದರು. ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಗಣೇಶ ಕಡಪ್ಪು ವಂದಿಸಿದರು. ಪುರುಷೋತ್ತಮ ಭಟ್ ಕೆ.ಕಾರ್ಯಕ್ರಮ ನಿರೂಪಿಸಿದರು.