ಉಪ್ಪಳ: ಮೊಗೇರ ಸರ್ವೀಸ್ ಸೊಸೈಟಿ ಆಯೋಜಿಸಿದ ಮೊಗೇರ ವಧು-ವರರ ಅನ್ವೇಷಣೆ ಅರ್ಥಪೂರ್ಣವೂ, ಮೊಗೇರ ಸಮುದಾಯಕ್ಕೆ ಉತ್ತಮ ದಾರಿದೀಪವೂ ಆಗಿದೆ ಎಂದು ಉಪ್ಪಳ ಪಂಚಮಿ ಹೋಟೆಲ್ ಮಾಲಕ ಜಯರಾಮ ಶೆಟ್ಟಿ ಕಡಂಬಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ನೇತೃತ್ವದಲ್ಲಿ ಉಪ್ಪಳದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮೊಗೇರ ವಧು-ವರರ ಅನ್ವೇಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮೊಗೇರ ಸರ್ವೀಸ್ ಸೊಸೈಟಿಯ ಇಂತಹ ಚಟುವಟಿಕೆಗಳು ಸ್ತುತ್ಯರ್ಹವಾದುದು. ಪರಸ್ಪರ ನೆರವು, ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೇಲ್ಪಂಕ್ತಿಯೊದಗಿಸುವುದು ಗಮನಾರ್ಹವಾದುದು ಎಂದು ಅವರು ತಿಳಿಸಿದರು.
ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಕೆ.ಕೆ.ಸ್ವಾಮಿಕೃಪಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಬಾಬು.ಯು.ಪಚ್ಲಂಪಾರೆ, ಕರ್ನಾಟಕ ರಾಜ್ಯ ಮೊಗೇರ ಸಂಘದ ವಿಜಯವಿಕ್ರಮ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಡಾ.ಆಶಾಲತ, ಸಂಜೀವ ಬಂದ್ಯೋಡು, ಮಾಧವ ವಯನಾಡು, ಗಿರಿಜಾ ತಾರಾನಾಥ ಕುಂಬಳೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಮೊಗೇರ ವಧು-ವರರ ಅನ್ವೇಷಣೆಯಲ್ಲಿ ಕಾಸರಗೋಡು ಹಾಗೂ ಕರ್ನಾಟಕಗಳ 45 ಮಂದಿ ವಧು-ವರರ ಭಾಗವಹಿಸಿದ್ದರು. ಈ ಪೈಕಿ 10 ಜೋಡಿ ವಧು-ವರರು ಆಯ್ಕೆಗೊಂಡರು. ಮೋಹನ ಯು.ಪ್ರಾಸ್ತಾವಿಕವಾಗಿ ಮಾತನಾಡಿದರು. ಆದರ್ಶ ಪಟ್ಟತ್ತಮೊಗರು ಸ್ವಾಗತಿಸಿ, ವಂದಿಸಿದರು.