ಮಧೂರು: ಬಸ್‍ವೊಂದು ಉರಳಿಬಿದ್ದು ಅಪಾರ ಹಾನಿ ಸಂಭವಿಸಿದ್ದು, ಚಾಲಕ ಹಾಗೂ ಪ್ರಯಾಣಿಕರಿಲ್ಲದಿರುವುದರಿಂದ ಜೀವಹಾನಿ ಸಂಭವಿಸದೆ ಪಾರಾಗಿದ್ದು, ಈ ಬಗ್ಗೆ ಜಾಲತಾಣಗಳಲ್ಲಿ ಭಾರೀ ಚಿತ್ರಗಳು ಹರಿದಾಡಿದೆ.
ಹೌದು...ಮಂಗಳವಾರ ಮಧ್ಯಾಹ್ನ ಮಧೂರು ಸಮೀಪ ಉಳಿಯತ್ತಡ್ಕ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಇಳಿಸಿದ ಬಸ್ಸ್ ಬಳಿಕ ಇಳಿಜಾರಾದ ರಸ್ತೆಯಲ್ಲಿ ಸಂಚರಿಸಿ ನಿಯಂತ್ರಣ ತಪ್ಪಿ ಬೃಹತ್ ಕಂದಕಕ್ಕೆ ಉರುಳಿರುವುದು ಜಿಲ್ಲೆಯಾದ್ಯಂತ ಭಾರೀ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಯಿತು.
ಕಾಸರಗೋಡು-ಸೀತಾಂಗೋಳಿ ರಸ್ತೆಯಲ್ಲಿ ಸಂಚರಿಸುವ ಖಾಸಗೀ ಬಸ್ ಮಂಗಳವಾರ ಮಧ್ಯಾಹ್ನ ಪ್ರಯಾಣಿಕರನ್ನು ಉಳಿಯತ್ತಡ್ಕದಲ್ಲಿ ಇಳಿಸಿ, ಬಳಿಕ ಊಟದ ಕಾರಣ ಬಸ್ ಚಾಲಕ ಹಾಗೂ ನಿರ್ವಾಹಕರು ತೆರಳಿದ್ದರು. ಆದರೆ ಹೀಗೆ ತೆರಳುವಾಗ ಬಸ್ ನಿಲ್ಲಿಸಿರುವುದು ಇಳಿಜಾರಾದ ಪ್ರದೇಶವಾಗಿತ್ತು. ಅಲ್ಲದೆ ಬಸ್ ಚಕ್ರಗಳು ಚಲಿಸದಂತೆ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೆ ತೆರಳಿದ್ದರು. ನಿಧಾನವಾಗಿ ಮುಂದಕ್ಕೆ ಚಲಿಸತೊಡಗಿದ ಬಸ್ ವೇಗ ಹೆಚ್ಚುಗೊಳಿಸಿ, ಉಳಿಯತ್ತಡ್ಕ-ಸೀತಾಂಗೋಳಿ ರಸ್ತೆಯಲ್ಲಿ ಸುಮಾರು 600 ಮೀಟರ್ ಗಳಷ್ಟು ಮುಂದೆ ಚಲಿಸಿ ನಿಯಂತ್ರಣ ತಪ್ಪಿ ಎಡಬದಿಯ ಕಂದಕವೊಂದಕ್ಕೆ ಉರುಳುವುದರೊಂದಿಗೆ ಬಸ್ ತನ್ನ ಒಂಟಿ ಯಾತ್ರೆಯನ್ನು ಕೊನೆಗೊಳಿಸಿತು.
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆ ಬಳಿಕ ಹಲವಾರು ತಮಾಶೆಯ ಅಂಸಗಳು ಹರಿದಾಡುತ್ತಿದ್ದು ಕುತೂಹಲಕ್ಕೆ ಕಾರಣವಾಯಿತು. ಚಾಲಕ ಹೋಟೆಲ್ ಗೆ ಕರೆದೊಯ್ಯದ ಬೇಸರದಲ್ಲಿ ಮುಂದೆ ಚಲಿಸಿದ ಬಸ್ ಕಮರಿಗೆ, ಚಾಲಕನ ಸೊಕ್ಕಡಗಿಸಲು ಒಬ್ಬನೇ ಸಂಚರಿಸಿ ಗುಂಡಿಗೆ..ಹೀಗೇ ವಿವಿಧ ತರದ ಸಂದೇಶಗಳು ರವಾನೆಯಾಗಿದೆ.