ನವದೆಹಲಿ: ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ಜಾರಿಗೆ ತರುವುದು ರಾಜ್ಯಗಳ ಸಾಂವಿಧಾನಿಕ ಕರ್ತವ್ಯ. ಹಾಗೆಯೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ನಿರ್ಣಯ ತೆಗೆದುಕೊಂಡವರು ಸೂಕ್ತ ಕಾನೂನು ಅಭಿಪ್ರಾಯ ಪಡೆಯಬೇಕು ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದವರು "ಅಸಂವಿಧಾನಿಕ" ಹೇಳಿಕೆಗಳನ್ನು ನೀಡುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿ ಕೇರಳ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದ ಒಂದು ದಿನದ ನಂತರ ಕೇಂದ್ರ ಸಚಿವರ ಹೇಳಿಕೆ ಬಂದಿದೆ. ಸಿಎಎಗೆ ಅವಕಾಶ ನೀಡುವುದಿಲ್ಲ ಅಥವಾ ಅದನ್ನು ಜಾರಿಗೊಳಿಸುವುದರ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುತ್ತಿದ್ದೇವೆ ಎಂದು ಹೇಳುವ ಸರ್ಕಾರವು ಸಾಂವಿಧಾನಿಕ ನಿಬಂಧನೆಗಳ ಬಗ್ಗೆ ಸೂಕ್ತವಾದ ಕಾನೂನು ಅಭಿಪ್ರಾಯವನ್ನು ಪಡೆಯಬೇಕು ಎಂದು ಪ್ರಸಾದ್ ಹೇಳಿದ್ದಾರೆ. ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ಜಾರಿಗೆ ತರುವುದು ರಾಜ್ಯಗಳ ಸಾಂವಿಧಾನಿಕ ಕರ್ತವ್ಯ ಎಂದು ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು. ಪೌರತ್ವ ಒಳಗೊಂಡಂತೆ ಕೇಂದ್ರ ಪಟ್ಟಿಯಡಿ ಬರುವ ವಿಷಯಗಳ ಬಗೆಗೆ ಸಂಸತ್ತು ಕಾನೂನುಗಳನ್ನು ರೂಪಿಸಬಹುದು ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ರಾಜ್ಯಗಳು ವಿರೋಧಿಸುವಂತಿಲ್ಲ. ಇದಕ್ಕೆ ಸಂವಿಧಾನದ 245 ನೇ ವಿಧಿಯ ಎರಡನೇ ನಿಯಮ ಸ್ಪಷ್ಟ ನಿದರ್ಶನವಾಗಿದೆ ಎಂದ ಸಚಿವರು " ಸಂವಿಧಾನದ 245 ನೇ ವಿಧಿಯ ಎರಡನೇ ನಿಯಮ ಹೇಳುವಂತೆ ಸಂಸತ್ತು ರಚಿಸಿದ ಯಾವುದೇ ಕಾನೂನು ಅಮಾನ್ಯವೆಂದು ಪರಿಗಣಿಸಲು ಬರುವುದಿಲ್ಲ. , ಏಕೆಂದರೆ ಅದು ಪ್ರಾದೇಶಿಕ ಮಾನ್ಯತೆಯನ್ನು ಒಳಗೊಂಡಿರುತ್ತದೆ" ಎಂದರು.
ಕೇರಳವಲ್ಲದೆ ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳು ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿಕೆ ನೀಡಿದೆ.