ಪೆರ್ಲ: ಅಭಿವೃದ್ಧಿಯ ಹೆಸರಲ್ಲಿ ರಸ್ತೆಬದಿಯ ಬೃಹತ್ ಮರಗಳನ್ನು ಕಡಿದುರುಳಿಸಲಾಗುತ್ತಿದ್ದು, ಪರಿಸರಪ್ರಿಯರನ್ನು ಅಸಮಧಾನಕ್ಕೀಡುಮಾಡಿದೆ. ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಅಗಲಗೊಳಿಸುವುದರ ಜತೆಗೆ ಮೆಕ್ಕಡಾಂ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಬೃಹತ್‍ಮರಗಳನ್ನು ಉರುಳಿಸಲಾಗುತ್ತಿದೆ.
ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುವುದಾಗಿ ತಿಳಿಸಿ, ಮರಗಳನ್ನು ವ್ಯಾಪಕವಾಗಿ ಕಡಿದುರುಳಿಸುತ್ತಿರುವುದರ ಹಿಂದೆ ಭಾರಿ ಸಂಚು ನಡೆಯುತ್ತಿರುವುದಾಗಿ ದೂರು ಕೇಳಿಬರುತ್ತಿದೆ. ರಸ್ತೆ ಅಗಲಗೊಳಿಸಲು ಬೇಕಾದಷ್ಟು ಜಾಗ ಹೊಂದಿದ್ದರೂ, ಮರಗಳನ್ನು ಕಡಿದುರುಳಿಸಲಾಗುತ್ತಿದೆ. ಪೆರ್ಲ ಪೇಟೆ ಆಸುಪಾಸು ಈ ರೀತಿ ಭಾರಿ ಗಾತ್ರದ ಮರಗಳನ್ನು ನೆಲಸಮಗೊಳಿಸಲಾಗಿದೆ. ಅಡ್ಕಸ್ಥಳದಿಂದ ಚೆರ್ಕಳ ವರೆಗೂ ಮರ ಕಡಿದುರುಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಕೆಲವೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಕಡಿದುರುಳಿಸಲು ವಿಶೇಷ ಅನುಮತಿ ಪಡೆದುಕೊಂಡಿರುವುದರ ಜತೆಗೆ ನೆರಳುನೀಡುವ ಬೃಹತ್‍ಮರಗಳನ್ನೂ ಕಡಿದುಹಾಕಿರುವುದು ಸಂಶಯಕ್ಕೆಡೆಮಾಡಿಕೊಟ್ಟಿದೆ.
ಪರಿಸರ ಪ್ರೇಮಿಗಳ ಪ್ರತಿಭಟನೆ:
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನೇಚರ್‍ಕ್ಲಬ್ ಸದಸ್ಯರು ಮರ ಕಡಿದುರುಳಿಸಿದ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ತಮ್ಮ ಪರಿಸರ ಜಾಗೃತಿ ಮೂಡಿಸಿದರು. ಪ್ರಕೃತಿಯೊಂದಿಗೆ ಸಾಮರಸ್ಯದ ಬಾಳ್ವೆ ನಡೆಸಿದಾಗ ಮಾತ್ರ ಜೀವಸಂಕುಲಗಳಿಗೆ ನೆಲೆನಿಲ್ಲಲು ಸಾಧ್ಯ. ಅಭಿವೃದ್ಧಿ ನೆಪದಲ್ಲಿ ಭಾರಿ ಗಾತ್ರದ ಮರಗಳನ್ನು ಕಡಿದುರುಳಿಸಿರುವುದು ಪರಿಸರ ಸಮತೋಲನಕ್ಕೆ ಭಾರಿ ಹೊಡೆತನೀಡಲಿರುವುದಾಗಿ ಸ್ಥಳೀಯ ವೈದ್ಯ ಡಾ. ಶ್ರೀಪತಿ ಕಜಂಪಾಡಿ ತಿಳಿಸಿದ್ದಾರೆ. ನೇಚರ್ ಕ್ಲಬ್ ಹಮ್ಮಿಕೊಂಡ 'ಪಶ್ಚಾತ್ತಾ'ಎಂಬ ಪರಿಸರ ಕಲಿಕಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನೇಚರ್ ಕ್ಲಬ್ ರೂವಾರಿ, ಶಿಕ್ಷಕ ಉಮೇಶ್ ಕೆ. ಪೆರ್ಲ, ಪೆರ್ಲ ಸ್ವಚ್ಛಭಾರತ್ ಅಭಿಯಾನದ ಸದಸ್ಯ ಟಿ.ಪ್ರಸಾದ್, ಶಿಕ್ಷಕರಾದ ಪ್ರವೀಣ್, ಶ್ರೀಧರ ಭಟ್, ಕೃಷ್ಣಪ್ರಸಾದ್ ಹಾಗೂ ನೇಚರ್‍ಕ್ಲಬ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನೇಚರ್‍ಕ್ಲಬ್ ರಸ್ತೆ ಎರಡೂ ಬದಿ ಸಾಲುಮರ ನೆಡುವ ಸಂಕಲ್ಪವನ್ನು ಕೈಗೊಳ್ಳಲಾಯಿತು.