HEALTH TIPS

ಕಟ್ಟಗಳ ಅಳಿವು ಉಳಿವು ನಮ್ಮ ಮುಂದಿದೆ 'ಕಟ್ಟಗಳೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮದಲ್ಲಿ ಜಲತಜ್ಞ ಶ್ರೀಪಡ್ರೆ


      ಪೆರ್ಲ:ತೋಡು ಅಥವಾ ಹೊಳೆಗೆ ಕಟ್ಟಲಾಗುವ ತಡೆಗೋಡೆ ಅಥವಾ ಅಣೆಕಟ್ಟುಗಳು ಕೃಷಿಕರ ಬದುಕಿನಂತೆ ಸ್ಥಿರತೆಯನ್ನು  ಅವಲಂಬಿಸಿದೆ.ಕಟ್ಟಗಳ ವೈವಿಧ್ಯತೆ, ಕಟ್ಟಗಳನ್ನು ಕಟ್ಟುವ ನಿಪುಣತೆ, ಕೌಶಲ್ಯಗಳನ್ನು ಸಮಾಜದ ಮುಂದಿರಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಜಲತಜ್ಞ ಶ್ರೀಪಡ್ರೆ ಅಭಿಪ್ರಾಯ ವ್ಯಕ್ತ ಪಡಿಸಿದರು.
     ನೀರಿನ ಸುಸ್ಥಿರತೆಯ, ಕಟ್ಟ ಕೇಂದ್ರಿತ ಪಾರಂಪರಿಕ ಕಾಯಕಕ್ಕೆ ಶಕ್ತಿ ಒದಗಿಸುವ ಸದಾಶಯದೊಂದಿಗೆ ಕುಂಬ್ಡಾಜೆ ಗ್ರಾಮ ಸೇವಾ ಗಂಥಾಲಯ ಆಶ್ರಯದಲ್ಲಿ ಗುರುವಾರ ಸಂಜೆ 'ಕಟ್ಟ ಕಟ್ಟುವ ಹಬ್ಬ' ಉದ್ಘಾಟನೆಗೊಂಡ ಪಡ್ರೆಯ ಸಜಂಗದ್ದೆ ಪಡ್ಪು ಪರಿಸರದಲ್ಲಿ 'ಕಟ್ಟಗಳೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮದ ಅಂಗವಾಗಿ ಸಜಂಗದ್ದೆ ಮನೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಮಳೆಗಾಲದ ಬಳಿಕವೂ ಮೇಲ್ಸ್ಥರದ ಜಲಮಟ್ಟದ ಸುಧಾರಿಸುವಲ್ಲಿ ಕಟ್ಟಗಳು ಮಹತ್ತರ ಪಾತ್ರ ವಹಿಸುತ್ತಿವೆ. ಕಟ್ಟಗಳ ಹಿಂದಿನ ಜಾಣ ಮರೆವು, ಮೌನವನ್ನು ಮುರಿದು ಪರಸ್ಪರ ಸಮನ್ವಯತೆಯೊಂದಿಗೆ ಕಟ್ಟ ನಿರ್ಮಾಣ ಕಾಯಕದಲ್ಲಿ ತೊಡಗಬೇಕು. ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 300ರಷ್ಟು ಅಣೆಕಟ್ಟುಗಳು ನಾನಾ ಕಾರಣಗಳಿಂದ ನಿಷ್ಪ್ರಯೋಜಕವಾಗಿ ಉಳಿದಿವೆ.ಕಟ್ಟ ನಿರ್ಮಾಣ ಕೌಶಲ್ಯ ಕೈಜಾರಿ ಹೋಗುವ ಸಂದಿಗ್ಧ ಪರಿಸ್ಥಿತಿ ನಮ್ಮ ಮುಂದಿದೆ.ಸಾಮೂಹಿಕ ಸಹಭಾಗಿತ್ವ, ಪ್ರಯೋಗ ಶೀಲತೆ, ಕಟ್ಟಗಳ ದಾಖಲಾತಿ ನಡೆಸುವುದರೊಂದಿಗೆ ಕಟ್ಟಗಳಿಗೆ ಸಾಮಾಜಿಕ ಮನ್ನಣೆ ಸಿಗುವಂತಾಗಲಿ ಎಂದು ಹಾರೈಸಿದರು.
       ನೀರ ನೆಮ್ಮದಿಯತ್ತ ಪಡ್ರೆ ಅಧ್ಯಕ್ಷ ಶ್ರೀಹರಿ ಭಟ್ ಸಜಂಗದ್ದೆ ಮಾತನಾಡಿ, ನೀರಿನ ಬಗ್ಗೆ ನಮ್ಮೆಲ್ಲರಲ್ಲೂ ಪ್ರೀತಿ ಮೂಡಬೇಕು.ಮಳೆಗಾಲದಲ್ಲಿ ಹರಿದು ಹೋಗುವ ಮಳೆ ನೀರನ್ನು ತಡೆದು ನಿಲ್ಲಿಸಿ ಭೂಮಿಗೆ ಇಂಗಿಸುವಲ್ಲಿ ನಾವು ಯಾವ ರೀತಿಯ ಪ್ರಯತ್ನಗಳನ್ನು ನಡೆಸಿದ್ದೇವೆ ಹಾಗೂ ನೀರಿನ ಮಿತ ಬಳಕೆಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸುವ ಕಾಲ ಬಂದಿದೆ.ಜೀವ ಜಲ ಉಳಿದಲ್ಲಿ ಮಾತ್ರ  ಜೀವ ನೆಲೆಯ ಉಳಿವು ಸಾಧ್ಯ ಎಂದರು.
   ನೀ.ನೆ.ಪ. ಕಾರ್ಯದರ್ಶಿ, ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಪಡ್ರೆಯ ಜಲಾಂದೋಲನದ ಪುಟ್ಟ ಹೆಜ್ಜೆಗಳು ಊರು ಹಾಗೂ ಪರ ಊರುಗಳಲ್ಲಿ ಬಹಳಷ್ಟು ಪ್ರಭಾವ ಬೀರಿದೆ.ಈ ಪುಟ್ಟ ಹೆಜ್ಜೆಗಳು ವಾಮನ ಹೆಜ್ಜೆಯಾಗಿ ಮಾರ್ಪಟ್ಟಲ್ಲಿ ಮುಂದಿನ ದಿನಗಳಲ್ಲಿ ನೀರ ನೆಮ್ಮದಿಯನ್ನು ಕಾಣಬಹುದು ಎಂದರು.
     ಕಟ್ಟಗಳ ತಜ್ಞ ಜಗದೀಶ್ಚಂದ್ರ ಕುತ್ತಾಜೆ,ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಏತಡ್ಕ ಮಾತನಾಡಿದರು.  ಗ್ರಂಥಾಲಯ ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಜತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎನ್., ಗ್ರಂಥಾಲಯ, ನೀ.ನೆ.ಪ. ಸದಸ್ಯರು, ಊರವರು ಉಪಸ್ಥಿತರಿದ್ದರು.ದೀಪ್ತಿ ಕೆ.ಎಸ್.ಪ್ರಾರ್ಥಿಸಿದರು. ವೈ.ವಿ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು.ಗ್ರಂಥಾಲಯ ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ವಂದಿಸಿದರು.ಸುಧಾರಿತ ಕಟ್ಟಗಳ ಪಾಲುದಾರ ಕೃಷಿಕ ಡಾ. ವೇಣು ಕಳೆಯತ್ತೋಡಿ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries