ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನ ಜಾತ್ರಾಮಹೋತ್ಸವದ ಸಂಭ್ರಮದಲ್ಲಿದ್ದು, ಫೆಬ್ರವರಿ 1ರಿಂದ 5ರ ವರೆಗೆ ಉತ್ಸವ ನಡೆಯಲಿದೆ.
ವಿಟ್ಲ ಸಮೀಪದ ಕೇಪು ಉಳ್ಳಾಲ್ತೀ ಕ್ಷೇತ್ರ, ಅನಂತಾಡಿ, ಕೆಲಿಂಜ, ಇಡಿಯಡ್ಕ ಸಹಿತ ಏಳು ಕಡೆ ಶ್ರೀ ಉಳ್ಳಾಲ್ತೀ ದೈವಗಳು ಶಕ್ತಿದಾಯಿನಿಯಾಗಿ ನೆಲೆ ನಿಂತಿದ್ದಾರೆ. ಇಡಿಯಡ್ಕ ದೇವಸ್ಥಾನದ ವಠಾರದಲ್ಲಿರುವ ಕಾರಣಿಕ ಹಾಗೂ ಪವಿತ್ರ ಶಂಖ ತೀರ್ಥ ಕೆಲವೊಂದು ಐತಿಹ್ಯಗಳಿಗೂ ಕಾರಣವಾಗಿದೆ. ದೇವಸ್ಥಾನದಲ್ಲಿ ಮಕ್ಕಳ ವಿಶೇಷ ಸೇವೆಯಾಗಿ ಕಜಂಬು ಉತ್ಸವ ನಡೆದುಬರುತ್ತಿದ್ದು, ಪವಿತ್ರ ಶಂಖ ತೀರ್ಥದಲ್ಲಿ ಮಕ್ಕಳ ಪುಣ್ಯಸ್ನಾನವೂನಡೆಯುತ್ತಾ ಬರುತ್ತಿದೆ.ದೇವಸ್ಥಾನ ಸನಿಹ ಶ್ರೀ ವಿಷ್ಣುಮೂರ್ತಿದೈವದ ಸ್ಥಾನವಿದ್ದು, ಐದು ವರ್ಷಗಳಿಗೊಮ್ಮೆ ಇಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ(ಒತ್ತೆಕೋಲ)ಮಹೋತ್ಸವ ನಡೆದುಬರುತ್ತಿದೆ. ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದುಬರುತ್ತಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಶ್ರೀ ಉಳ್ಳಾಲ್ತೀ ದೈವನರ್ತನ ವೀಕ್ಷಣೆಗೆ ಮಹಿಳೆಯರಿಗೆ ಅವಕಾಶವಿರುವುದಿಲ್ಲ. ಆದರೆ ಇಡಿಯಡ್ಕದಲ್ಲಿ ಈ ನಿರ್ಬಂಧವಿಲ್ಲ. 2008ರಲ್ಲಿ ಪುನರ್‍ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಂತರ 2018ರಲ್ಲಿ ನೂತನ ಧ್ವಜಸ್ತಂಭ ಅಳವಡಿಸುವುದರ ಜತೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು.
ಜಾತ್ರಾ ಮಹೋತ್ಸವ:
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದ್ದು, ಫೆ. 1ರಂದು ಬೆಳಗ್ಗೆ 8ಕ್ಕೆ ಗಣಪತಿ ಹವನದೊಂದಿಗೆ ಧ್ವಜಾರೋಹಣ ನಡೆಯುವುದು. ನಂತರ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಉಗ್ರಾಣಭರಣ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ 7ಕ್ಕೆ ರಂಗಪೂಜೆ, ರಾತ್ರಿ 8.30ಕ್ಕೆ ಯಕ್ಷಗಾನ ನಾಟ್ಯ ವೈಭವ ನಡೆಯುವುದು.
ವೈದಿಕ ಕಾರ್ಯಕ್ರಮದ ಅಂಗವಾಗಿ ಫೆ. 1ರಂದು ಸಾಯಂಕಾಲ 4.30ಕ್ಕೆ ಮಹಾರುದ್ರಾಭಿಷೇಕ ಮತ್ತು 2ರಂದು ಬೆಳಗ್ಗೆ 8.30ಕ್ಕೆ ಮಹಾರುದ್ರ ಯಾಗ ನಡೆಯುವುದು. ಬೆಂಗಳೂರು ಗಿರಿನಗರ ಶ್ರೀ ಶಂಕರ ವೇದಪಾಠಶಾಲೆಯ ಪವಮಾನ ಶ್ರೀ ವೇದಮೂರ್ತಿ ಸಂಪಿಗೆ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
2ರಂದು ಬೆಳಗ್ಗೆ 8ಕ್ಕೆ 108ಕಾಯಿ ಗಣಪತಿ ಹವನ, ಮಹಾರುದ್ರಯಾಗ, ರಾತ್ರಿ 8ಕ್ಕೆ ಶಿವಾಂಜಲಿ ನೃತ್ಯ ಕೇಂದ್ರ ಪೆರ್ಲ ವತಿಯಿಂದ ಭರತನಾಟ್ಯ-ಜಾನಪದ ನೃತ್ಯ ಜರುಗಲಿದೆ. 3ರಂದು ಬೆಳಗ್ಗೆ 6ಕ್ಕೆ ಚಂಡಿಕಾ ಹವನ, ತುಲಾಭಾರ, ಸಾಯಂಕಾಲ 6ಕ್ಕೆ ಕಜಂಬು ಉತ್ಸವ, ರಾತ್ರಿ 8ಕ್ಕೆ ಶ್ರೀ ಉಳ್ಳಾಲ್ತೀ ನೆಮೋತ್ಸವನಡೆಯುವುದು. ಫೆ. 4ರಂದು ಬೆಳಗ್ಗೆ 10ಕ್ಕೆ ಸತ್ಯನಾರಾಯಣ ಪೂಜೆ, 7.30ಕ್ಕೆ ಸುಡುಮದ್ದು ಪ್ರದರ್ಶನ, ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, ಶ್ರೀ ದೈವದ ತೊಡಙಳ್, ಕುಳಿಚ್ಚಾಟ, ರಾತ್ರಿ 8.30ಕ್ಕೆ ನೃತ್ಯ ವೈವಿಧ್ಯ ನಡೆಯುವುದು. 5ರಂದು ಬೆಳಗ್ಗೆ 9ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯುವುದು.