ನವದೆಹಲಿ: ಗರ್ಭಪಾತಕ್ಕೆ ಅನುಮತಿ ನಿಡುವ ಸಮಯದ ಮಿತಿಯನ್ನು ವಿಸ್ತರಿಸಿ ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಪ್ರಸ್ತುತ 20 ವಾರಗಳ ಗಡುವನ್ನು 24 ವಾರಗಳವರೆಗೆ ವಿಸ್ತರಿಸಿ ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಣಯ ಅಂಗೀಕರಿಸಿದೆ.
ಈ ಹಿಂದಿನ ವೈದ್ಯಕೀಯ ಕಾರಣಕ್ಕೆ ಗರ್ಭಧಾರಣೆಯನ್ನು ತೆಗೆಸುವ ಕಾಯ್ದೆ 1971ಕ್ಕೆ ತಿದ್ದುಪಡಿ ತರಲು ವೈದ್ಯಕೀಯ ಕಾರಣಕ್ಕೆ ಗರ್ಭಧಾರಣೆಯನ್ನು ತೆಗೆಸುವ (ತಿದ್ದುಪಡಿ) ಕಾಯ್ದೆ 2020 ಮಸೂದೆಗೆ ಕ್ಯಾಬಿನೆಟ್ ನಿನ್ನೆ ಅನುಮೋದನೆ ನೀಡಿತು. ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ. ಸಚಿವ ಸಂಪುಟ ಸಬೆ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಗರ್ಭಪಾತಕ್ಕೆ ಅನುಮತಿ ನೀಡುವ ಮೇಲಿನ ಮಿತಿಯನ್ನು ಪ್ರಸ್ತುತ 20 ವಾರಗಳಿಂದ 24 ವಾರಗಳವರೆಗೆ ವಿಸ್ತರಿಸಲಾಗಿದೆ.ಇದು ಗರ್ಭಧಾರಣೆಯ ಸುರಕ್ಷಿತ ಮುಕ್ತಾಯವನ್ನು ಖಚಿತಪಡಿಸುತ್ತದೆ ಮತ್ತು ಮಹಿಳೆಯರಿಗೆ ಅವರ ಸಂತಾನೋತ್ಪತ್ತಿ ಹಕ್ಕನ್ನು ನೀಡುತ್ತದೆ ಎಂದು ಅವರು ಹೇಳಿದರು.
24 ವಾರಗಳವರೆಗೆ ವಿಸ್ತರಣೆಯು ಅತ್ಯಾಚಾರಕ್ಕೆ ಒಳಗಾದವರು, ವಿಕಲಾಂಗ ಬಾಲಕಿಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಸಹಾಯ ಮಾಡುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.ಪ್ರಗತಿಪರ ಸುಧಾರಣೆಯಲ್ಲಿ ಮತ್ತು ಮಹಿಳೆಯರಿಗೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುವಲ್ಲಿ, ವೈದ್ಯಕೀಯ ಕಾರಣಕ್ಕೆ ಗರ್ಭಧಾರಣೆಯನ್ನು ತೆಗೆಸುವ (ತಿದ್ದುಪಡಿ) ಕಾಯ್ದೆ 2020 ಮೂಲಕ 20 ವಾರಗಳ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲಾಗಿದೆ.ಇದು ಅತ್ಯಂತ ಪ್ರಮುಖವಾಗಿರಲಿದೆ ಏಕೆಂದರೆ ಮೊದಲ 5 ತಿಂಗಳಲ್ಲಿ ಸಂಬಂಧಪಟ್ಟ ಯುವತಿ ಗರ್ಭ ಧರಿಸಿರುವ ಬಗೆಗೆ ಅರಿವು ಪಡೆಯುತ್ತಾಳೆ ಹಾಗೂ ಆಕೆ ಗರ್ಭಪಾತಕ್ಕೆ ಅನುಮತಿ ಬೇಡಲು ನ್ಯಾಯಾಲಯಕ್ಕೆ ತೆರಳಬೇಕಿದೆ ಈ ಕುರಿತು ವಿವಿಧ ಪರಿಣಿತರೊಡನೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ ಇದು ಗರ್ಭಿಣಿ ಮಹಿಳೆಯ ಮರಣವನ್ನು ತಪ್ಪಿಸುತ್ತದೆ ಎಂದು ಅವರು ಹೇಳಿದರು.