ಬದಿಯಡ್ಕ: ಬೇಳದ ಸಂತ ಬಾರ್ತಲೋಮೆಯ ಹಿರಿಯ ಬುನಾದಿ ಶಾಲೆಯ 500 ರಷ್ಟು ವಿದ್ಯಾರ್ಥಿಗಳಿಗೆ ಕ್ರಿಸ್ಮಸ್ ಹಬ್ಬದ ರಜಾದಿನದ ಚಟುವಟಿಕೆಯಾಗಿ ಶಾಲೆಯ ಬಿ-ಗ್ರೀನ್ ಪರಿಸರ ಸಂಘವು ಪ್ಲಾಸ್ಟಿಕ್ ತನ್ನಿ ಬಹುಮಾನ ಪಡೆಯಿರಿ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿತು.
ಕೇರಳ ಸರ್ಕಾರವು ಪ್ಲಾಸ್ಟಿಕ್ ನಿಷೇಧಿಸುವ ಯೋಜನೆಯನ್ನು ಬೆಂಬಲಿಸುವ ಸಲುವಾಗಿ ರಜಾ ಸಮಯದಲ್ಲಿ ಮನೆಯ ಪರಿಸರದಲ್ಲಿರುವ ಪ್ಲಾಸ್ಟಿಕ್ ಮಾಲಿನ್ಯಗಳನ್ನು ಸಂಗ್ರಹಿಸಿ ಶುಚಿಗೊಳಿಸಿ ಶಾಲೆಗೆ ತಂದು ಬಹುಮಾನವನ್ನು ಪಡೆಯುವ ಯೋಜನೆಯ ಭಾಗವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮಾಲಿನ್ಯಗಳನ್ನು ತಂದು ಬಹುಮಾನ ಪಡೆದರು. ಬಹುಮಾನವಾಗಿ ಬಟ್ಟೆಚೀಲಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ನಿವೇದಿತಾ ಮಕ್ಕಳಿಗೆ ವಿತರಿಸಿ ಪ್ಲಾಸ್ಟಿಕ್ ತ್ಯಜಿಸುವ ಪ್ರತಿಜ್ಞೆಯನ್ನು ಬೋಧಿಸಿದರು.
ಗ್ರಾ.ಪಂ. ಸದಸ್ಯೆ ಆನಿತಾ ಕ್ರಾಸ್ತ ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿ ವಿನೂತನ ಕಾರ್ಯಕ್ರಮಗಳೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ ಶಾಲಾ ಪರಿಸರ ಸಂಘಕ್ಕೆ ಅಭಿನಂದಿಸಿದರು. ಹಾಗೂ ವಿದ್ಯಾರ್ಥಿಗಳು ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಗಳನ್ನು ಸಂಸ್ಕರಣಾ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದರು.