ಕಾಸರಗೋಡು: ಭೌಗೋಳಿಕ ಮಿತಿಗಳನ್ನು ತಂದೊಡ್ಡುವ ಅಭಿವೃದ್ಧಿ ಯೋಜನೆಗಳ ದೃಷ್ಟಿಕೋನಗಳಿಗಿಂತ ಭಿನ್ನವಾಗಿ ಸಾಮಾಜಿಕ-ಪ್ರಾಕೃತಿಕ ಸಂರಕ್ಷಣೆಯೊಂದಿಗಿನ ಅಭಿವೃದ್ಧಿಯಾಗಿರುವ ಸುಸ್ಥಿರ ನಗರ ಅಭಿವೃದ್ಧಿ ಯೋಜನೆ ಆಧುನಿಕ ಕಾಲದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂದು ಕಿಫ್ ಬಿ ಸಂವಾದ ಅಭಿಪ್ರಾಯಪಟ್ಟಿದೆ.
ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ನಡೆಯುತ್ತಿರುವ ರಾಜ್ಯ ಸರಕಾರದ ಕಿಫ್ ಬಿ ಪ್ರದರ್ಶನ ಅಂಗವಾಗಿ ಬುಧವಾರ ನಡೆದ ತಾಂತ್ರಿಕ ವಿಷಯಗಳ ಸಂವಾದ ಕಾರ್ಯಕ್ರಮದಲ್ಲಿ ಈ ಅಭಿಮತ ವ್ಯಕ್ತವಾಗಿದೆ. ಸುಸ್ಥಿರ ನಗರ ಅಭಿವೃದ್ಧಿ ಯೋಜನೆಯತ್ತ ನಾವು ಹೆಜ್ಜೆಯಿರಿಸಬೇಕಾದ ದಿನಗಳು ಸಮೀಪಿಸಿವೆ ಎಂದು ಸಮಾರಂಭ ಅಭಿಪ್ರಾಯಪಟ್ಟಿದೆ.
"ಸಸ್ಟೈ ನೆಬಲ್ ಅರ್ಬನ್ ಇನ್ಫ್ರಾ ಸ್ಟ್ರ ಕ್ಚರ್ ಆಂಡ್ ಮೆನೆಜ್ ಮೆಂಟ್" ಎಂಬ ವಿಷಯದಲ್ಲಿ ಕೋಯಿಕೋಡ್ ಎನ್.ಐ.ಟಿ.ಯ ಆರ್ಕಿ ಟೆಕ್ಚರ್ ಆಂಡ್ ಪ್ಲಾನಿಂಗ್ ವಿಭಾಗ ಮುಖ್ಯಸ್ಥ ಡಾ.ಪಿ.ಪಿ.ಅನಿಲ್ ಕುಮಾರ್ ಉಪನ್ಯಾಸ ನಡೆಸಿದರು. ಜಗತ್ತಿನ ಶೇ 5 ಮಂದಿ ಜನತೆ ಬದುಕುತ್ತಿರುವುದು ಶೇ 2 ಭಾಗ ಮಾತ್ರವಾಗಿರುವ ಭೂಪ್ರದೇಶದಲ್ಲಿ. ಈ ವಲಯದಲ್ಲಿ ವಿಶ್ವದ ಶೇ 80 ಆರ್ಥಿಕ ಪ್ರಕ್ರಿಯೆಗಳು ನಡುಯುತ್ತಿವೆ. ಜನಸಾಂದ್ರತೆ ಹೆಚ್ಚುತ್ತಿರುವ ಈ ವಲಯದಲ್ಲಿ ಅಭಿವೃದ್ಧಿಗೆ ಸ್ಪಷ್ಟವಾದ ಯೋಜನೆ ಅಗತ್ಯ. ನಾಳಿನ ತಲೆಮಾರಿನ ಬಗೆಗೂ ಗಂಭೀರ ಚಿಂತನೆ ನಡೆಸಿ ಯೋಜನೆ ಸಿದ್ಧಪಡಿಸಬೇಕಾದ ಅಗತ್ಯವಿದೆ. ಇದನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕಿಫ್ ಬಿ ಆರ್ಥಿಕ ಸಂಗ್ರಹ ನಡೆಸುತ್ತಿದೆ. ಸಂಚಾರಿ ನಿಯಂತ್ರಣ, ಬಂಜರು ಪ್ರದೇಶದ ಸದ್ವನಿಯೋಗ, ಪರಂಪರಾಗತ ಸೊತ್ತುಗಳ ಸಂರಕ್ಷಣೆ, ದುರಂತನಿವಾರಣೆ, ನಗರಗಳ ಬ್ರಾಂಡಿಂಗ್, ವಿನೋದ ಯೋಜನೆಗಳು ಇತ್ಯಾದಿ ಅಳವಡಗೊಂರುವ ಅಭಿವೃದ್ಧಿ ಯೋಜನೆ ರಚನೆಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ವಿವಿಧ ವಿಷಯಗಳಲ್ಲಿ ಪರಿಣತರಾದ ಡಾ.ಎಂ.ರಮೇಶನ್, ಎಬಿನ್ ಸಾಂ ಉಪನ್ಯಾಸ ನಡೆಸಿದರು. ಐ.ಐ.ಐ.ಸಿ. ಪ್ರಭಾರ ನಿರ್ದೇಶಕ ಡಾ.ಬಿ.ಸುನಿಲ್ ಕುಮಾರ್ ಸಮನ್ವಯಕಾರರಾಗಿದ್ದರು.