ಕುಂಬಳೆ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಿಂದಲೇ ರಾಷ್ಟ್ರಪಕ್ಷಿಯ ಅಸ್ವಿತ್ವಕ್ಕೇ ಕುತ್ತು ಉಂಟಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದ್ದು, ಪ್ರಕೃತಿ ಪ್ರೇಮಿಗಳ ಆತಂಕಕ್ಕೂ ಕಾರಣವಾಗಿದೆ.
ಸೀತಾಂಗೋಳಿಯ ಕೈಗಾರಿಕಾ ಪ್ರಾಂಗಣ ಕಿನ್ಪ್ರಾ(ಕೇರಳ ಇಂಡಸ್ಟ್ರಿಯಲ್ ಇನ್ಪಾಸ್ಟಕ್ಷರಲ್ ಡೆವೆಲಪ್‍ಮೆಂಟ್ ಕಾರ್ಪೋರೇಶನ್) ದಲ್ಲಿ ಕಾರ್ಯವೆಸಗುತ್ತಿರುವ ಕೇಂದ್ರ ಸರ್ಕಾರ ಅಧೀನದ ಎಚ್‍ಎಎಲ್(ಹಿಂದೂಸ್ಥಾನ್ ಏರೋನೋಟಿಕಲ್ ಲಿಮಿಟೆಡ್) ನ ಬೃಹತ್ ಆವರಣ ಗೋಡೆಗೇರುವ ರಾಷ್ಟ್ರ ಪಕ್ಷಿ ನವಿಲು ಆವರಣಗೋಡೆಯ ಚೂಪಾದ ಗಾಜಿನ ಮೊಳೆಗಳ ಆಘಾತದಿಂದ ಕಾಲುಗಳಿಗೆ ಗಾಯವಾಗಿ ಪರಿತಪಿಸುತ್ತಿರುವುದು ನಿತ್ಯ ಘಟನೆಯಾಗಿ ಕಂಡುಬರುತ್ತಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ವಿಸ್ತಾರವಾಗಿರುವ ಎಚ್‍ಎಎಲ್ ಆವರಣದೊಳಗೆ ಜನಸಾಮಾನ್ಯರಿಗೆ ಪ್ರವೇಶವಿರುವುದಿಲ್ಲ. ಜೊತೆಗೆ ಸುಮಾರು 8 ರಿಂದ 10 ಫೀಟ್ ಭಾರೀ ಎತ್ತರದ ಆವರಣ ಗೋಡೆ ಸುತ್ತಲೂ ಇದ್ದು, ಆವರಣ ಗೋಡೆ ಪೂರ್ತಿ ಮೇಲ್ಬದಿಯಲ್ಲಿ ಗಾಜಿನ ಚೂರುಗಳನ್ನು ಸುರಕ್ಷಿತ ದೃಷ್ಟಿಯಿಂದ ಜೋಡಿಸಲಾಗಿದೆ.
ನವಿಲು ಹೆಚ್ಚಳ-ಬರಡು ಭೀತಿ!
ಜಿಲ್ಲೆಯ ಬಯಲು ಪ್ರದೇಶಗಳಲ್ಲಿ ಕಳೆದ ಐದಾರು ವರ್ಷಗಳಿಂದ ವ್ಯಾಪಕ ಪ್ರಮಾಣದಲ್ಲಿ ನವಿಲುಗಳು ಬೀಡುಬಿಟ್ಟಿವೆ. ಸಾಮಾನ್ಯವಾಗಿ ನವಿಲುಗಳು ಉಷ್ಣ ಪ್ರದೇಶದಲ್ಲಿ ವಾಸಿಸುವವಾಗಿದ್ದು, ಕಾಡು ಮತ್ತು ಆಹಾರದ ಕೊರತೆಯ ಕಾರಣಗಳಿಂದಲೂ ನವಿಲುಗಳು ಬಯಲು ಪ್ರದೇಶಗಳತ್ತ ಮುಖಮಾಡಿವೆ. ಬಹುಷಃ ಕಾಸರಗೋಡು ಜಿಲ್ಲೆ ಬರಡು ಭೂಮಿಯಾಗುವತ್ತ ಸಾಗುತ್ತಿರುವುದರ ಸೂಚನೆಯೂ ಇದಾಗಿರಬಹುದು. ಸಾಮಾನ್ಯವಾಗಿ ಜನಸಾಮಾನ್ಯರಿಗೆ ಯಾವ ತೊಂದರೆಗಳನ್ನೂ ಕೊಡದ ನವಿಲುಗಳು ಭತ್ತದ ಪೈರು, ತರಕಾರಿ ಕೃಷಿಯನ್ನು ಒಂದಷ್ಟು ನಾಶಪಡಿಸುತ್ತವೆ. ಆದರೆ ಬೃಹತ್ ಪ್ರಮಾಣದ ತೊಂದರೆಗಳನ್ನು ಉಂಟುಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ.
ಸೀತಾಂಗೋಳಿ ಪರಿಸರ ವಿಶಾಲ ಬಯಲು ಪ್ರದೇಶವಾಗಿದ್ದು, ಇಲ್ಲಿ ನೂರಾರು ನವಿಲುಗಳು ಬೀಡುಬಿಟ್ಟಿವೆ. ಆದರೆ ಎತ್ತರ ಪ್ರದೇಶಗಳನ್ನೇ ಆಶ್ರಯಿಸಿ ಹಾರಾಡುವ ನವಿಲುಗಳು ಇಲ್ಲಿಯ ಎಚ್‍ಎಎಲ್ ಆವರಣ ಗೋಡೆಯನ್ನು ಸ್ಪರ್ಶಿಸುವಾಗ ಗೋಡೆಯ ಗಾಜಿನ ಚೂರುಗಳು ಅಗಲವಾದ ನವಿಲುಗಳ ಪಾದದ ಅಡಿಯನ್ನು ಘಾಸಿಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗೆ ಗಾಯವಾದ ನವಿಲುಗಳು ಕುಂಟುತ್ತಿರುವುದು ಸಾಕಷ್ಟು ಕಂಡುಬರುತ್ತಿದೆ. ಕೆಲವು ಸಮಯವಷ್ಟೇ ಜೀವಿಸುವ ಅವುಗಳು ಬಳಿಕ ಮರಣಿಸುತ್ತಿರುವುದಾಗಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಚ್‍ಎಎಲ್ ಅಧಿಕೃತರಿಗೆ ಅರಿವಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಭಿಮತ:
ನವಿಲುಗಳ ಸಹಿತ ಇತರ ಪ್ರಾಣಿ ಪಕ್ಷಿಗಳ ಜೀವವು ಮನುಷ್ಯರ ಹಲವು ಕ್ರಮಗಳ ಪರಿಣಾಮ ಭೀತಿ ಎದುರಿಸುತ್ತಿದೆ. ಆವರಣ ಗೋಡೆಗೆ ಅಪಾಯಕಾರಿ ಗಾಜಿನ ಚೂರುಗಳನ್ನು ರಕ್ಷಣೆಯ ದೃಷ್ಟಿಯಲ್ಲಾದರೂ ಬಳಸುವುದು ಹಕ್ಕಿಗಳು, ಹಾವುಗಳಿಗೆ ಜೀವಾಪಾಯಕ್ಕೆ ಕಾರಣವಾಗುವುದು. ಎಚ್‍ಎಎಲ್ ಅಧಿಕೃತರು ಈ ಬಗ್ಗೆ ಇನ್ನಾದರೂ ತುರ್ತು ಕ್ರಮ ಕೈಗೊಳ್ಳಬೇಕು.
ರಾಜು.ಮಾಸ್ತರ್ ಕಿದೂರು.
ಪಕ್ಷಿಪ್ರೇಮಿ ತಜ್ಞ, ಶಿಕ್ಷಕ.ಕುಂಬಳೆ
............................................................................................................................
ಪ್ರತಿನಿತ್ಯ ನವಿಲುಗಳು ಗಾಜಿನ ಚೂರುಗಳ ಆಘಾತದಿಂದ ಘಾಠಸಿಗೊಳ್ಳುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಹಲವು ಬಾರಿ ಎಚ್‍ಎಎಲ್ ಅಧಿಕೃತರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಗಾಯಗೊಳ್ಳುವ ನವಿಲುಗಳ ಯಾತನೆಯನ್ನು ನೋಡುವುದು ಕಷ್ಟವಾಗಿದೆ. ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಲೇಬೇಕು.
ಸುಬ್ಬ ಪಾಟಾಳಿ. ಸೀತಾಂಗೋಳಿ
ಸ್ಥಳೀಯ ನಿವಾಸಿ, ವ್ಯಾಪಾರಿ.