ಕುಂಬಳೆ: ಗುಡ್ಡ, ಬೆಟ್ಟ, ಗದ್ದೆ, ಬಯಲು, ಕಾಡು, ತೋಡನ್ನು ಮಕ್ಕಳು ಸುತ್ತಾಡಿದರು. ಹಕ್ಕಿಗಳ ಕಲರವ, ಕೀಟಗಳ ಸದ್ದು, ಚಿಟ್ಟೆಗಳ ಬಣ್ಣ ಹಾಗೂ ಗಿಡ ಮರ ಬಳ್ಳಿಗಳ ಹಸಿರುಡುಗೆಯನ್ನು ಆಸ್ವಾದಿಸುತ್ತಾ ಜೀವ ಜಗತ್ತಿನ ಅನೇಕ ಗೌಪ್ಯತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಐವತ್ತು ವರುಷ ಹಿಂದಿನ ಕೃಷಿ ಜೀವನ ಪದ್ಧ್ದತಿಯನ್ನು ಹಿರಿಯರಿಂದ ತಿಳಿದುಕೊಂಡರು.
ಹೊಸ ವರ್ಷಾಚರಣೆಗಾಗಿ ಕಾಸರಗೋಡು ಪಕ್ಷಿ ಪ್ರೇಮಿ ತಂಡವು ಶಿರಿಯ ವಾನಂದೆ ಪ್ರದೇಶದಲ್ಲಿ ಹಮ್ಮಿಕೊಂಡ ಪರಿಸರ ಅಧ್ಯಯನ ಶಿಬಿರವೊಂದರ ಕೆಲವು ತುಣುಕುಗಳಿವು.
ಪಶ್ಚಿಮ ಘಟ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಬೂದು ತಲೆಯ ಬುಲ್ ಬುಲ್, ಯುರೋಪ್ ಭೂಖಂಡದಿಂದ ವಲಸೆ ವರುವ ಗ್ರೀನ್ ವಾಬ್ರ್ಲರ್, ಗದ್ದೆಯಲ್ಲಿ ರೈತನ ಸಂಗಾತಿಯಾಗಿರುವ ಏಷ್ಯನ್ ಓಪನ್ ಬಿಲ್ ಮುಂತಾದ ಹಕ್ಕಿಗಳನ್ನು, ಏಷ್ಯಾದ ಅತೀ ದೊಡ್ಡ ಚಿಟ್ಟೆಯಾದ ಸದರ್ನ್ ಬರ್ಡ್ ವಿಂಗ್ ಹಾಗೂ ಕೆಲವು ಲಾರ್ವ ಮತ್ತು ಪ್ಯೂಪಗಳನ್ನು ಮಕ್ಕಳು ನಿರೀಕ್ಷಿಸಿದರು. ಚೇರೆ, ಕೊಕ್ಕೆಕಾಯಿ, ಗಮಟೆ, ಕಾಸರಕ ಮೊದಲಾದ ಗಿಡ ಮರಗಳ ಬಗೆಗೂ ಚರ್ಚಿಸಲಾಯಿತು.
ಹೊಸ ವರುಷದಲ್ಲಿ ಪ್ರತಿ ದಿನ ಹದಿನೈದು ನಿಮಿಷಗಳನ್ನು ಪರಿಸರ ವೀಕ್ಷಣೆಗಾಗಿ ಮೀಸಲಿರಿಸುತ್ತೇವೆ, ಅಳತೆಯಿಂದ ನೀರನ್ನು ಬಳಕೆ ಮಾಡುತ್ತೇವೆ ಹಾಗೂ ಆಹಾರವನ್ನು ಪೆÇೀಲು ಮಾಡುವುದಿಲ್ಲ ಎಂಬ ನಿರ್ಧಾರವನ್ನು ಮಕ್ಕಳು ಈ ಸಂದರ್ಭದಲ್ಲಿ ಕೈಗೆತ್ತಿಕೊಂಡರು.
ಹಿರಿಯ ಪತ್ರಕರ್ತರಾದ ಮಲಾರ್ ಜಯರಾಮ ರೈ ಮಕ್ಕಳಿಗೆ ಶುಭಹಾರೈಸಿ ಶಿರಿಯ ಊರಿನ ಚರಿತ್ರೆಯನ್ನೊಳಗೊಂಡ ಸಾವಿರದಲ್ಲೊಂದು ಗ್ರಾಮ ಸೀರೆ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಧರ್ಮತ್ತಡ್ಕ, ಬೋವಿ ಮತ್ತು ಕುಂಬಳೆ ಶಾಲೆಯ ಇಪ್ಪತ್ತು ಮಕ್ಕಳು ಅಧ್ಯಯನ ತಂಡದಲ್ಲಿದ್ದರು. ಪಕ್ಷಿ ನಿರೀಕ್ಷಕರಾದ ಮ್ಯಾಕ್ಸಿಂ ಕೊಲ್ಲಂಗಾನ, ಜೇಶ್ಮ ನಾರಂಪಾಡಿ ಹಾಗೂ ರಾಜು ಕಿದೂರು ತಮ್ಮ ಅನುಭವಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.
ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಪ್ರಣಮ್ಯ ಶೆಟ್ಟಿ ಶಿಬಿರದ ನೇತೃತ್ವ ವಹಿಸಿದ್ದಳು. ವಾನಂದೆ ಮನೆತನದ ಹಿರಿಯ ಕೃಷಿಕರಾದ ಸದಾಶಿವ ಶೆಟ್ಟಿ, ಸೀತ, ಸತೀಶ್ಚಂದ್ರ, ಅಧ್ಯಾಪಕಿ ಆಶಾಲತ, ದೀಪ್ತ, ದಯಾನಂದ ಶೆಟ್ಟಿ, ಶಿಲ್ಪ, ಉಮೇಶ್ ಶೆಟ್ಟಿ, ಸಾತ್ವಿಕ್ ಮೊದಲಾದವರು ಸಹಕರಿಸಿದರು. ವೈಷ್ಣವಿ ಹಾಗೂ ಮಹೇಶ್ವರನ್ ವಂದಿಸಿದರು.