ಮಂಜೇಶ್ವರ: ಕೇರಳ ದಿನೇಶ್ ಬೀಡಿ ಮಂಜೇಶ್ವರ ಬೀಡಿ ಕೆಲಸಗಾರರ ಸಹಕಾರಿ ಸಂಘದ 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಶೋಭಾಯಾತ್ರೆ ಮತ್ತು ವಿಚಾರ ಸಂಕಿರಣ ಮಂಗಳವಾರ ಹೊಸಂಗಡಿಯಲ್ಲಿ ನಡೆಯಿತು.
ಬೆಳಗ್ಗೆ ಸಂಘದ ಕಚೇರಿಯಿಂದ ಸಿಂಗಾರಿ ಮೇಳ ಮತ್ತು ಯಕ್ಷಗಾನ ಪ್ರಾತ್ಯಕ್ಷಿಕೆಗಳೊಂದಿಗೆ ಹೊರಟ ಶೋಭಾಯಾತ್ರೆಯು ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್‍ನ ವಠಾರದಲ್ಲಿ ಸಮಾಪನಗೊಂಡಿತು. ಶೋಭಾಯಾತ್ರೆಯಲ್ಲಿ ಬೀಡಿ ಕಾರ್ಮಿಕರು, ನಿವೃತ್ತ ಸಿಬ್ಬಂದಿಗಳು ಹಾಗು ವಿವಿಧ ನೇತಾರರು ಭಾಗವಹಿಸಿದ್ದರು.
ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್‍ನ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕೇರಳ ದಿನೇಶ್ ಬೀಡಿ ಕೇಂದ್ರ ಸಂಘದ ನಿರ್ದೇಶಕಿ ಬೇಬಿ ಶೆಟ್ಟಿ ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಶಂಶಾದ್ ಶುಕೂರ್, ಭಾರತಿ ಜೆ.ಶೆಟ್ಟಿ ಉಪಸ್ಥಿತರಿದ್ದರು.
`ಕೇರಳ ದಿನೇಶ್ ಬೀಡಿ ನಡೆದು ಬಂದ ದಾರಿ' ವಿಷಯ ಮಂಡನೆಯನ್ನು ಕೇಂದ್ರ ಸಂಘದ ನಿರ್ದೇಶಕ ಕೆ.ಬಾಲಕೃಷ್ಣನ್ ಮಂಡಿಸಿದರು. ಎಸ್.ಜೆ.ದಿವಾಕರ, ಮೋಹನ ಬಿ, ವಿಶ್ವನಾಥ ಕುದುರು, ವೆಂಕಪ್ಪ ಭಟ್, ರಮಾಬಾಯಿ ಟೀಚರ್, ಪ್ರಶಾಂತ ಕನಿಲ, ಗಂಗಾಧರ ಕೊಡ್ಡೆ, ಐತ್ತಪ್ಪ ನಾರಾಯಣಮಂಗಳ ಮತ್ತು ನ್ಯಾಯವಾದಿ ಅಜಿತ್ ಕುಮಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಭೆಯಲ್ಲಿ ಸಂಘದ ಆರಂಭಿಕ ಕಾರ್ಯದರ್ಶಿಗಳಾದ ಬಿ.ಎಂ.ಅನಂತ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಿವೃತ್ತ ಸಿಬ್ಬಂದಿಗಳಾದ ವಿ.ಬಾವುಟ್ಟಿ, ಎಂ.ಪದ್ಮನಾಭ, ಕೆ.ಸೋಮಪ್ಪ, ನಿವೃತ್ತ ಬೀಡಿ ಕಾರ್ಮಿಕೆ ಆನಂದಿ ಅವರನ್ನು ಗೌರವಿಸಲಾಯಿತು. ಪ್ರಸ್ತುತ ಹಿರಿಯ ಬೀಡಿ ಕಾರ್ಮಿಕರಾದ ಚಿತ್ರಾವತಿ, ಸುಮತಿ ಮತ್ತು ಪದ್ಮಾವತಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.