ಕಾಸರಗೋಡು: ಎಂಡೋಸಂತ್ರಸ್ತರ ಬಾಳ್ವೆ ಹೋರಾಟದಲ್ಲೇ ಕಳೆದುಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ಮತ್ತೆ ರಾಜಧಾನಿ ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದೆ. ಜನವರಿ 30ರಂದು ತಿರುವನಂತಪುರ ಸೆಕ್ರೆಟೇರಿಯೆಟ್ ಎದುರು ಸಂತ್ರಸ್ತರು ಹಾಗೂ ತಾಯಂದಿರು ಹೋರಾಟದ ಕಹಳೆ ಮೊಳಗಿಸಲಿದ್ದಾರೆ.
ಕಳೆದ ಕೆಲವು ತಿಂಗಳಂದ ಎಂಡೋಸಂತ್ರಸ್ತರಿಗೆ ಪಿಂಚಣಿ ಮೊತ್ತ ಕೈಸೇರದಿರುವುದು ಸಂತ್ರಸ್ತರ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಸೆಕ್ರೆಟೇರಿಯೆಟ್ ಎದುರು ಧರಣಿ ಕೈಗೊಳ್ಳಲು ಇದು ಪ್ರಮುಖ ಕಾರಣವಾಗಿದೆ. ಉಳಿದಂತೆ ಸುಪ್ರೀಂ ಕೋರ್ಟು ತೀರ್ಪಿನನ್ವಯ ಪುನರ್ವಸತಿ ಕಲ್ಪಿಸುವುದು, ಸಂತ್ರಸ್ತರಿಗೆಲ್ಲರಿಗೂ ತಲಾ ಐದು ಲಕ್ಷ ರೂ. ಪರಿಹಾರ ವಿತರಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಮುಂದಿರಿಸಲಾಗಿದೆ. 2019 ಫೆಬ್ರವರಿಯಲ್ಲಿ ಸಂತ್ರಸ್ತರೊಂದಿಗೆ ಇವರ ತಾಯಂದಿರೂ ಸೆಕ್ರೆಟೇರಿಯೆಟ್ ಎದುರು ನಡೆಸಿದ ನಿರಾಹಾರ ಧರಣಿ ಸಂದರ್ಭ ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಿ, ಭರವಸೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಈ ಬೇಡಿಕೆ ಈಡೇರಿಸುವಲ್ಲಿ ಸರಕಾರ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಹೋರಾಟಕಣಕ್ಕಿಳಿದಿರುವುದಾಗಿ ಒಕ್ಕೂಟದ ಪದಾಧಿಕಾರಿಗಳು ತಿಳಿಸುತ್ತಾರೆ.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಮತ್ತೆ ಹೋರಾಟಕ್ಕಿಳಿದಿರುವುದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ದಿನ ಸಮೀಪಿಸುತ್ತಿರುವಂತೆ ಇಂತಹ ಹೋರಾಟ ಆಯೋಜಿಸಿರುವುದು ಸರ್ಕಾರಕ್ಕೆ ಮುಜುಗರ ತಂದೊಡ್ಡುವ ಸಾಧ್ಯತೆಯಿದೆ.
ಸಂತಸ್ತ್ರರ ಸಮಾಧನ ಯತ್ನ?!:
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಧರಣಿಗೆ ಮುಂದಾಗುತ್ತಿದ್ದಂತೆ ಸರ್ಕಾರ ಎಂಡೋಸಂತ್ರಸ್ತರಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನಡೆಸಲು ದಿನ ನಿಗದಿಪಡಿಸಿದೆ. ಫೆಬ್ರವರಿ 8ರಂದು ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಆಡಳಿತ ಮಂಡಳಿ ಕಚೇರಿ, ಎಂಡೋಸಂತ್ರಸ್ತರಿಗಾಗಿ ಕಾರ್ಯಾಚರಿಸುತ್ತಿರುವ ಬಡ್ಸ್ ಶಾಲೆಗಳ ಉದ್ಘಾಟನೆ, ಮುಳಿಯಾರಿನಲ್ಲಿ ತಲೆಯೆತ್ತಲಿರುವ ಎಂಡೋಸಂತ್ರಸ್ತರ ಪುನರ್ವಸತಿ ಗ್ರಾಮಕ್ಕೆ ಶಿಲಾನ್ಯಾಸಕ್ಕೂ ದಿನ ನಿಗದಿಪಡಿಸಲಾಗಿದೆ. ಎಂಡೋಸಂತ್ರಸ್ತರ ಹೋರಾಟದ ಕಾವು ತಣ್ಣಗಾಗಿಸಲು ಸರ್ಕಾರ ನಡೆಸುವ ತಂತ್ರ ಇದಾಗಿದೆ ಎಂಬ ದೂರು ಸಂತ್ರಸ್ತರ ವಲಯದಲ್ಲಿ ಕೇಳಿಬರುತ್ತಿದೆ.