ಕಾಸರಗೋಡು: ಜಿಲ್ಲಾಡಳಿತದ ಕೇಂದ್ರ ಸ್ಥಾನ ಜಿಲ್ಲಾಧಿಕಾರಿಕಚೇರಿಯ ಎದುರು ಸ್ಥಾಪಿಸಲಾದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಕಂಚಿನ ಪೂರ್ಣಪ್ರಮಾಣದ ಪ್ರತಿಮೆ ಅನಾವರಣಸಮಾರಂಭ ಮಂಗಳವಾರ ಜರುಗಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಗಾಂಧೀಜಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಹಾತ್ಮಾ ಗಾಂಧಿ ಅವರ ಜೀವನದರ್ಶನ ಕಾಲಾತೀತವಾಗಿದ್ದು, ಇಂದಿನ ಕಾಲಾವಧಿಗೆ ಅನಿವಾರ್ಯವೂ ಹೌದು. ವಿಶ್ವಕ್ಕೆ ಮಹತ್ವದ ಆದರ್ಶವನ್ನು ಕೊಡುಗೆಯಾಗಿ ನೀಡಿದ ಅವರ ಬದುಕು ನಮಗೆಲ್ಲರಿಗೂ ಆದರ್ಶವಾಗಿದ್ದು, ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳಿಗೆ ಬಾಪೂಜಿ ಅವರ ತತ್ವಾದರ್ಶ ಪ್ರೇರಣಾದಾಯಕವಾಗಿರುವುದಾಗಿ ತಿಳಿಸಿದರು. ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಡೆಸುತ್ತಿರುವ ವೇಳೆ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿಈ ಮೂರ್ತಿಯ ಅನಾವರಣ ಅರ್ಥಪೂರ್ಣ ಎಂದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ಮತ್ತು ಮೂರ್ತಿಯ ನಿರ್ಮಾಣಕಾರ(ಶಿಲ್ಪಿ) ಉಣ್ಣಿ ಕಾನಾಯಿ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ವಿವಿಧ ಗ್ರಾವಪಂಚಾಯಿತಿ ಅಧ್ಯಕ್ಷರಾದ ಷಾಹಿನಾ ಸಲೀಂ, ಕೆ.ಜಲೀಲ್, ಶಾರದಾ ಎಸ್.ನಾಯರ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಸಹಾಯಕ ಇಂಜಿನಿಯರ್ ಎಸ್.ಸೌಮ್ಯಾ ವಂದಿಸಿದರು.