ಕಾಸರಗೋಡು: ಸದಾ ಕ್ರಿಯಾಶೀಲತೆಗೆ ಜಿಲ್ಲೆಯ ಬಳಾಲ್ ಶ್ರೀ ಭಗವತೀ ದೇವಾಲಯದ ಗದ್ದೆ ಒಂದು ಉತ್ತಮ ನಿರ್ದಶನ. ಭತ್ತದ ಜೊತೆಗೆ ತರಕಾರಿ ಬೆಳೆಯೂ ಇಲ್ಲಿ ಶ್ರೀಮಂತ. ಇದರ ಹಿಂದೆ ಹತ್ತು ಮಂದಿ ತಾಯಂದಿರ ಒಕ್ಕೂಟದ ದುಡಿಮೆಯ ಯಶೋಗಾಥೆಯಿದೆ.
ಗದ್ದೆಯಲ್ಲಿ ಬಂಗಾರದ ಬೆಳೆ ಪಡೆಯುವ ಈ ತಾಯಂದಿರಿಗೆ ಹೆಗಲು ನೀಡಲು ಈ ಬಾರಿ ಬಳಾಲ್ ಕೃಷಿಭವನವೂ ರಂಗಕ್ಕಿಳಿದಿದೆ. ಇದರ ಹಿನ್ನೆಲೆಯಲ್ಲಿ ಈ ಬಾರಿಯ ಕೃಷಿ ಆರಂಭಗೊಂಡಿರುವುದು ಕೃಷಿಭವನದ ಸಹಬಾಗಿತ್ವದಲ್ಲಿ. ಕೃಷಿ ಇಲಾಖೆಯ ಅಲಸಂಡೆಯ ವಿವಿಧ ವಿಭಾಗಗಳ ಕೃಷಿ ವಿಸ್ತಾರ ಎಂಬ ಯೋಜನೆಯ ಪ್ರಕಾರ ನಡೆದಿರುವ ಕೃಷಿಯ ಪರಿಣಾಮ ಬಯಲು ಈ ಬಾರಿ ಸಮೃದ್ಧವಾಗಿದೆ. ಎರಡೂವರೆ ಹೆಕ್ಟೇರ್ ಜಾಗದಲ್ಲಿ ಈ ಕೃಷಿ ನಡೆಯುತ್ತಿದೆ.
ಭತ್ತದ ಕೊಯ್ಲು ಈ ಬಾರಿ ಕೊಂಚ ತಡವಾಗಿ ನಡೆದಿರುವ ಹಿನ್ನೆಲೆಯಲ್ಲಿ ಅಲಸಂಡೆ ಕೃಷಿಯೂ ಈ ಬಾರಿ ತಡವಾಗಿಯೇ ನಡೆದಿದೆ. ಕುಟ್ಟಿಪಯರ್, ಚೆರುಪಯರ್, ಮುದಿರ ಎಂಬ ಹೆಸರಿನ ಮೂರು ವಿಧದ ಅಲಸಂಡೆ ಕೃಷಿ ಇಲ್ಲಿ ಪ್ರಧಾನವಾಗಿದೆ. ಉಳಿದೆಡೆ ಸಾಧಾರಣ ಗತಿಯಲ್ಲಿ ಭತ್ತದ ಕೊಯ್ಲಿನ ನಂತರ ಗದ್ದೆಯನ್ನು ಯಾವ ಕೃಷಿ ನಡೆಸದೇ ಹಾಗೇ ಬಿಡಲಾಗುತ್ತದೆ. ಆದರೆ ಇಲ್ಲಿ ಈ ತಾಯಂದಿರು ನಡೆಸುವ ಯತ್ನ ಇತರರಿಗೆ ಮಾದರಿಯಾಗಿದೆ.
ಕೇವಲ ಒಂದು ಕೃಷಿ ಗುಂಪು ಎಂಬ ಸೀಮಿತತೆಗೆ ಒಳಗಾಗದೆ, ತಾಯಂದಿರ ಸೌಹಾರ್ದ ಒಕ್ಕೂಟ ಎಂಬ ನಿಟ್ಟಿನಲ್ಲಿ ಇಲ್ಲಿ ಮಹಿಳೆಯರು ನಡೆಸುವ ದುಡಿಮೆ ಬಂಗಾರದ ಬೆಳೆ ಪಡೆಯಲು ಕಾರಣವಾಗಿದೆ. ಜೈವಿಕ ಕೃಷಿ ವಿಧಾನ ಸಹಿತ ಪ್ರಕೃತಿಗೆ ಪೂರಕವಾದ ಕೃಷಿ ವಿಧಾನವನ್ನು ಇವರು ಅನುಸರಿಸುತ್ತಾರೆ. ಅಡುಗೆ ಮನೆಯ ಬಿರುಸು ಕಳೆದ ಮೇಲೆ ದಿನದ ಕೊಂಚ ಹೊತ್ತು ಕೃಷಿಗಾಗಿ ತಾಯಂದಿರು ತಮ್ಮ ಸಮಯವನ್ನು ಮೀಸಲಿಡುವುದು ಇವರ ದಿನಚರಿ. ಸ್ವಂತ ಕೃಷಿ ನಡೆಸುವ ಹಿನ್ನೆಲೆಯಲ್ಲಿ ತಮ್ಮ ಮನೆಯ ಸದಸ್ಯರ ಜೊತೆಗೆ ಕನಿಷ್ಠ ಸುತ್ತಮುತ್ತಲ ಜನಕ್ಕೆ ವಿಷಮುಕ್ತ ತರಕಾರಿ ಒದಗಿಸಲು ಸಾಧ್ಯವಾಗುತ್ತಿದೆ ಎಂಬುದು ಇವರಿಗೆ ತೃಪ್ತಿ ತರುವ ವಿಚಾರ.ಮುಂದಿನ ಜನಾಂಗ ಆರೋಗ್ಯಪೂರ್ಣವಾಗಿ ಬೆಳೆದು ಬರುವಲ್ಲಿ ಇದು ಪೂರಕವಾಗಿದೆ ಎಂದವರು ನಂಬುತ್ತಾರೆ.
ಸ್ಥಳೀಯರಾದ ತ್ರ್ಯೇಸ್ಯಾಮ್ಮ, ಬಾಲಾಮಣಿ, ಗಂಗಾದೇವಿ, ಬೇಬಿ, ವಿ.ಓಮನಾ, ಶ್ಯಾಮಲಾ, ಪುಷ್ಪಾ ಕುಮಾರಿ, ಪದ್ಮಿನಿ, ತಂಗಮ್ಮ, ಓಮನಾ ಈ ತಂಡದ ಸದಸ್ಯರಾಗಿದ್ದಾರೆ. ಸ್ಥಳೀಯ ಅನುಭವಿ ಕೃಷಿಕರಾದ ಬಿ.ಶಶಿಧರನ್, ಪಿ.ಕೆ.ರಾಮಚಂದ್ರನ್, ಎಂ.ಮಾಧವನ್ ಮೊದಲದವರು ಈ ತಾಯಂದಿರಿಗೆ ಬೇಕಾದ ಬೆಂಬಲೊದಗಿಸುತ್ತಿದ್ದಾರೆ. ಮನೆಯ ಅಗತ್ಯ ಕಳೆದ ನಂತರ ಉಳಿದ ತರಕಾರಗಳನ್ನು ಕುಟುಂಬಶ್ರೀ ಸಹಿತ ಸ್ಥಳೀಯ ಮಾರಾಟಗಾರರಿಗೆ ಇವರು ಮಾರಾಟ ನಡೆಸಿ ಆದಾಯ ಗಳಿಸುತ್ತಾರೆ.
( ಫೆÇಟೋ ಮಾಹಿತಿ: ಕಾಸರಗೋಡು ಜಿಲ್ಲೆಯ ಬಳಾಲ್ ಶ್ರೀ ಭಗವತಿ ದೇವಾಲಯದ ಗದ್ದೆಯಲ್ಲಿ ನಡೆಸಲಾದ ಅಲಸಂಡೆ ಕೃಷಿ. )
ಕೃಷಿಯಲ್ಲಿ ತೊಡಗಿರುವ ಮಹಿಳೆಯರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಕೃಷಿಯಿಂದ ದೂರ ಉಳಿದಿರುವ ಮಹಿಳೆಯರನ್ನು ಮರಳಿಕರೆತರುವ, ಬರಡಾಗಿ ಉಳಿದಿರುವ ಕೃಷಿ ಜಾಗಗಳನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಕೃಷಿ ಇಲಾಖೆಯ ವತಿಯಿಂದ ಈ ರೀತಿಯ ಸಹಕಾರ ನೀಡಲಾಗುತ್ತಿದೆ.
- * ಅನಿಲ್ ಸೆಬಾಸ್ಟಿನ್,
ಕೃಷಿ ಅಧಿಕಾರಿ, ಬಳಾಲ್ ಕೃಷಿಭವನ.