ಕಾಸರಗೋಡು: ಜಪ್ತಿ ಕ್ರಮ ಎದುರಿಸುತ್ತಿದ್ದ ಕುಂಬಡಾಜೆಯ ಸತೀಶ್ ರೈ ಮತ್ತು ಪದ್ಮನಾಭ ಅವರಿಗೆ ರಿಯಾಯಿತಿ ಸೌಲಭ್ಯ ಲಭಿಸಿರುವುದು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ತಂದೆ ಮಾಡಿದ್ದ ಸಾಲ ಮರುಪಾವತಿಗೆ ಗತ್ಯಂತರವಿಲ್ಲದೆ ಇವರು ಕಾನೂನು ಕ್ರಮಕ್ಕೆ ಸಿಲುಕಿಕೊಂಡು ಬಳಲುತ್ತಿದ್ದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರೆವೆನ್ಯೂ ರಿಕವರಿ ಅದಾಲತ್ ವೇಳೆ ಇವರಿಬ್ಬರಿಗೆ ಈ ಸದವಕಾಶ ಒದಗಿ ಬಂದಿದೆ. ಅದಾಲತ್ ನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಉದ್ಘಾಟನೆ ನಡೆಸುವ ವೇಳೆ ಇವರಿಬ್ಬರ ಅರ್ಜಿಗಳನ್ನು ಪರಿಶೀಲಿಸಲಾಗಿತ್ತು. ಕೃಷಿಗಾಗಿ ಕುಂಬಡಾಜೆಯ ವಿಶ್ವನಾಥ ರೈ ಅವರು 2012ರಲ್ಲಿ 50 ಸಾವಿರ ರೂ. ಸಾಲ ಪಡೆದಿದ್ದರು. ಮೊದಲ ಹಂತಗಳಲ್ಲಿ ಸಾಲ ಮರುಪಾವತಿ ನಡೆಸಿದ್ದರೂ, ನಂತರದ ದಿನಗಳಲ್ಲಿ ಕೃಷಿನಾಶ ಸಂಭವಿಸಿದ ಹಿನ್ನೆಲೆಯಲ್ಲಿ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ ಸಾಲ ಮರುಪಾವತಿಗೆ ಗತ್ಯಂತರವಿಲ್ಲದಾಗಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಅವರು ನಿಧನಹೊಂದಿದ್ದರು. ಇದರ ಪರಿಣಾಮ ಇವರ ಸಾಲದ ಮರುಪಾವತಿ ಹೊಣೆ ಪುತ್ರ ಸತೀಶ್ ರೈ ಅವರ ಮೇಲೆ ಮತ್ತು ಸಾಲಕ್ಕೆ ಜಾಮೀನು ನಿಂತದ್ದ ಪದ್ಮನಾಭ ಅವರ ಮೇಲೆ ಬಂದಿತ್ತು. ಕೃಷಿ ಬಿಟ್ಟರೆ ಬೇರಾವ ಜೀವನ ಮಾರ್ಗವೂ ಇಲ್ಲದ ಇವರಿಬ್ಬರಿಗೆ ಕೃಷಿಯಲ್ಲೂ ನಷ್ಟ ಅನುಭವಿಸಬೇಕಾಗಿದ್ದು, ಸಾಲಮರುಪಾವತಿಗೆ ದಾರಿಯಲ್ಲದಾಗಿತ್ತು. ಅದಾಲತ್ ಗೆ ಹಾಜರಾದ ಇವರು ಜಿಲ್ಲಾಡಳಿತೆಯ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಮತುಕತೆ ನಡೆಸಿದ ಪರಿಣಾಮ ಇನ್ನು ಮುಂದೆ 25 ಸಾವಿರ ರೂ. ಮರುಪಾವತಿಸಿದರೆ ಸಾಕು ಎಂಬ ತೀರ್ಪು ಒದಗಿಸಲಾಗಿದೆ. ಇದು ಇವರಿಬ್ಬರಿಗೆ ಸಮಾಧಾನ ನಿಟ್ಟುಸಿರು ತಂದಿದೆ.