ಬದಿಯಡ್ಕ: ಅಧಿಕಾರಕ್ಕೇರಿ ಮೂರೂವರೆ ವರ್ಷಗಳಾದರೂ ಅಧ್ಯಾಪಕರಿಗೆ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ಎಡಪಕ್ಷ ಅಧ್ಯಾಪಕ ಸಂಘಟನೆಗಳಿಗೆ ತಲೆಬಾಗುತ್ತಿರುವ ಸರ್ಕಾರವು ಬಾಷಾ ಅಲ್ಪಸಂಖ್ಯಾತ ವಿಭಾಗದ ಜನರಿಗೆ ನ್ಯಾಯ ಒದಗಿಸಿಲ್ಲ. ಕೇಂದ್ರ ಸರ್ಕಾರವು ಜ್ಯಾರಿಗೆ ತಂದ ಪೌರತ್ವ ತಿದ್ದುಪಡಿ ವಿಧೇಯಕವನ್ನು ಮುಂದಿಟ್ಟು ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಯುವಮೋರ್ಚಾ ಮಾಜಿ ಜಿಲ್ಲಾ ಅಧ್ಯಕ್ಷ ಸುನಿಲ್ ಪಿ.ಆರ್. ಹೇಳಿದರು.
ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಪರಿಸರದಲ್ಲಿ ಜರಗಿದ ರಾಷ್ಟ್ರೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು.) ಕುಂಬಳೆ ಉಪಜಿಲ್ಲಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಧ್ಯಾಪಕ ಸಂಘಟನೆಗಳಲ್ಲಿ ಎನ್.ಟಿ.ಯು. ಇಂದು ಬಲಿಷ್ಠವಾಗಿದ್ದು, ರಾಜ್ಯಮಟ್ಟದ ಶಾಲಾಕಲೋತ್ಸವದ ಧ್ವನಿ ಮತ್ತು ಬೆಳಕು ವಿಭಾಗದ ನೇತೃತ್ವವನ್ನು ವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ ಕೀರ್ತಿಯನ್ನು ಗಳಿಸಿಕೊಂಡಿದೆ. ಇದು ಸಂಘಟನೆಗೆ ಹೆಮ್ಮೆಯ ವಿಚಾರವಾಗಿದೆ. ಉಳಿದಿರುವ ಕನ್ನಡ ಅಧ್ಯಾಪಕರ ಹುದ್ದೆಗಳಿಗೆ 1ರಿಂದ 10ನೇ ತರಗತಿ ತನಕ ಕನ್ನಡ ಕಲಿತವರನ್ನೇ ಕನ್ನಡ ಶಾಲೆಗಳಿಗೆ ನೇಮಿಸಬೇಕು ಎಂದರು.
ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಎನ್.ಟಿ.ಯು. ಕುಂಬಳೆ ಉಪಜಿಲ್ಲಾ ಅಧ್ಯಕ್ಷ ರಂಜಿತ್ ಎಂ. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನೀರ್ಚಾಲು ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಶಿವಪ್ರಕಾಶ್ ಎಂ.ಕೆ., ಮುಖ್ಯೋಪಾಧ್ಯಾಯರುಗಳಾದ ವೆಂಕಟರಾಜ ಸಿ.ಎಚ್., ಚಂದ್ರಶೇಖರ ರೈ ಶುಭಾಶಂಸನೆಗೈದರು. ಕಾರ್ಯದರ್ಶಿ ಶರತ್ ಕುಮಾರ್ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ನಡೆಯಿತು. ಸಹಕಾರ ಭಾರತಿಯ ಝೋನಲ್ ಸಹಕಾರಿಯಾಗಿ ಚುನಾಯಿತರಾದ ವಿಘ್ನೇಶ ಕೆದುಕೋಡಿ ಹಾಗೂ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಧ್ವನಿ ಮತ್ತು ಬೆಳಕು ಸಮಿತಿಯ ಸಂಚಾಲಕರಾಗಿ ಅಚ್ಚುಕಟ್ಟಿನ ನಿರ್ವಹಣೆಗೈದ ಪ್ರಭಾಕರನ್ ನಾಯರ್ ಅವರನ್ನು ಅಭಿನಂದಿಸಲಾಯಿತು. ರಾಜ್ಯಸಮಿತಿ ಸದಸ್ಯ ಪ್ರಭಾಕರನ್ ನಾಯರ್ ಬೆಳಗ್ಗೆ ಧ್ವಜಾರೋಹಣಗೈದರು. ಶೈಲಜಾ ಟೀಚರ್ ಪ್ರಾರ್ಥನೆ ಹಾಡಿದರು.