ಬದಿಯಡ್ಕ: ಪೂರ್ವಜನ್ಮದ ಸುಕೃತ ಫಲವಿದ್ದರೆ ಮಾತ್ರ ಒಂದು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಬರುತ್ತದೆ. ಸದಾ ಭಕ್ತಿಮಾರ್ಗದಲ್ಲಿ ಮುನ್ನಡೆಯುವುದರಿಂದ ಊರಿಗೆ ಹಾಗೂ ನಮ್ಮ ಮನೆಗೆ ಒಳಿತಾಗುತ್ತದೆ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ತಿಳಿಸಿದರು.
ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 2020 ಫೆಬ್ರವರಿ 6ರಿಂದ 12ರ ತನಕ ನಡೆಯಲಿರುವ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನವನ್ನು ನೀಡಿದರು.
ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರವಾದ ಶಬರಿಮಲೆಯ ವಿಚಾರದಲ್ಲಿ ಸರಕಾರವು ಕಳೆದ ವರ್ಷದ ನಿಲುವನ್ನು ಸಡಿಲಗೊಳಿಸಿದ್ದು ಆಸ್ತಿಕ ಜನರ ಭಕ್ತಿಮಾರ್ಗದ ಹೋರಾಟಕ್ಕೆ ಸಿಲುಕಿದ ಜಯವಾಗಿದೆ. ಗೋಸಾಡ ಶ್ರೀ ಕ್ಷೇತ್ರವು ಅಪಾರ ಸಾನ್ನಿಧ್ಯವನ್ನು ಹೊಂದಿದೆ ಎನ್ನುವುದು ಇಲ್ಲಿಗೆ ಆಗಮಿಸುವಾಗಲೇ ವ್ಯಕ್ತವಾಗುತ್ತದೆ. ಇದು ಈ ಊರಿನ ಶಕ್ತಿಕೇಂದ್ರವಾಗಿದ್ದು ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಪಾವನರಾಗೋಣ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ರಂಗನಾಥ ರಾವ್ ಮುಳ್ಳೇರಿಯ ಮಾತನಾಡಿದರು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಭಟ್ ಭಸ್ಮಾಜೆ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆಯನ್ನು ನೀಡಿ ಶುಭಹಾರೈಸಿದರು. ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಸತ್ಯಮೂರ್ತಿ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿಯ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ, ಆರ್ಥಿಕ ಸಮಿತಿ ಅಧ್ಯಕ್ಷ ಎಸ್.ಎನ್ ಮಯ್ಯ ಬದಿಯಡ್ಕ, ವಸಂತಿ ಟೀಚರ್ ಅಗಲ್ಪಾಡಿ, ಐತ್ತಪ್ಪ ಮವ್ವಾರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ವೇಣುಗೋಪಾಲ ಕಳೆಯತ್ತೋಡಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ರೈ ಮಠದಮೂಲೆ ವಂದಿಸಿದರು. ಕಾರ್ಯದರ್ಶಿ ನಾರಾಯಣ ಗೋಸಾಡ ನಿರೂಪಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಪರವೂರ ಭಕ್ತಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.