ಚೆನ್ನೈ: 2000 ರೂಪಾಯಿ ನೋಟುಗಳನ್ನು ಎಟಿಎಂ ಗಳಲ್ಲಿ ವಿತರಿಸುವುದನ್ನು ಮಾ.1 ರಿಂದ ಸ್ಥಗಿತಗೊಳಿಸುವುದಾಗಿ ಇಂಡಿಯನ್ ಬ್ಯಾಂಕ್ ಹೇಳಿದೆ.
ಎಟಿಎಂ ಗಳಲ್ಲಿ 2000 ನೋಟುಗಳನ್ನು ಪಡೆಯುವ ಗ್ರಾಹಕರು ಚಿಲ್ಲರೆ ಪಡೆಯಲು ಬ್ಯಾಂಕ್ ಗೆ ಬರುತ್ತಾರೆ. ಇದನ್ನು ತಡೆಯುವುದಕ್ಕಾಗಿ ಎಟಿಎಂ ಗಳಲ್ಲಿ ಮಾ.1 ರಿಂದ 2000 ರೂಪಾಯಿ ನೋಟಿನ ಬದಲು 200 ರೂಪಾಯಿ ನೋಟುಗಳನ್ನು ಹೆಚ್ಚು ವಿತರಣೆ ಮಾಡಲಾಗುತ್ತದೆ ಎಂದು ಇಂಡಿಯನ್ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಡಿಯನ್ ಬ್ಯಾಂಕ್ ಜೊತೆ ಅಲ್ಲಾಹಾಬಾದ್ ಬ್ಯಾಂಕ್ ಸಹ ವಿಲೀನಗೊಳ್ಳಲಿದ್ದು, ಆ ಬ್ಯಾಂಕ್ ನ ಎಟಿಎಂ ನಲ್ಲಿಯೂ ಸಹ 2000 ರೂ ನೋಟು ವಿತರಣೆ ಸ್ಥಗಿತಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಬ್ಯಾಂಕ್ ಅಧಿಕಾರಿಗಳು ವಿಲೀನ ಪ್ರಕ್ರಿಯೆ ನಂತರ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಇಂಡಿಯನ್ ಬ್ಯಾಂಕ್ ನ ನಡೆಯನ್ನು ಬೇರೆ ಯಾವ ಸರ್ಕಾರಿ ಸ್ವಾಮ್ಯ ಅಥವಾ ಖಾಸಗಿ ಬ್ಯಾಂಕ್ ಗಳು ಪಾಲಿಸುತ್ತಿಲ್ಲ. ಇದೇ ವೇಳೆ ಫೈನಾನ್ಷಿಯಲ್ ಸಾಫ್ಟ್ ವೇರ್ ಹಾಗೂ ಸಿಸ್ಟಮ್ಸ್ (ಎಫ್ ಎಸ್ ಎಸ್) ನ ವಿ ಬಾಲಸುಬ್ರಹ್ಮಣಿಯನ್ ಮಾತನಾಡಿದ್ದು, ನಮ್ಮ ಗ್ರಾಹಕರಾಗಿರುವ ಖಾಸಗಿ ಬ್ಯಾಂಕ್ ಗಳಿಂದ ಎಟಿಎಂ ನಲ್ಲಿ 2,000 ರೂಪಾಯಿ ನೋಟುಗಳ ವಿತರಣೆಯನ್ನು ಸ್ಥಗಿತಗೊಳಿಸಲು ನಮಗೆ ಆದೇಶ ಬಂದಿಲ್ಲ ಎಂದು ಹೇಳಿದ್ದಾರೆ. ಎಫ್ ಎಸ್ ಎಸ್ ದೇಶಾದ್ಯಂತ ವಿವಿಧ ಬ್ಯಾಂಕ್ ಗಳ ಎಟಿಎಂ ಜಾಲವನ್ನು ನಿರ್ವಹಿಸುವ ಸಂಸ್ಥೆಯಾಗಿದೆ.