ಕಾಸರಗೋಡು: ಸಂಯೋಜಿತ ಚಿಕಿತ್ಸಾ ಪದ್ದತಿಯ ವಿನೂತನ ಪರಿಕಲ್ಪನೆಯ ಮೂಲಕ ಜಗದ್ವಿಖ್ಯಾತವಾಗಿರುವ ಐಎಡಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಸುಧೀರ್ಘ ಅವಧಿಯ ತ್ಯಾಗ-ಚಿಂತನೆಗಳು ಇದೆ. ವ್ಯಾಪಾರೀಕರಣದಲ್ಲಿ ಮುಳುಗೇಳುತ್ತಿರುವ ಇಂದಿನ ವೈದ್ಯಕೀಯ ಲೋಕಕ್ಕೆ ವಿಭಿನ್ನವಾಗಿ ಜನಸಾಮಾನ್ಯರ ಮಧುರ ಬದುಕನ್ನು ಕನಸಾಗಿರಿಸಿ ಐಎಡಿ ಇಟ್ಟಿರುವ ದಿಟ್ಟ ಹೆಜ್ಜೆಯ ಹಿಂದಿನ ಬೃಹತ್ ಇತಿಹಾಸ ಇಂದು ಕುತೂಹಲ ಮತ್ತು ರೋಮಾಂಚನಕಾರಿ ಎಂದು ಖ್ಯಾತ ವಿಮರ್ಶಕ,ಅಂಕಣಗಾರ ಮತ್ತು ಅಮೆರಿಕಾದ ಇಂಟೆಲ್ ನ ಸಂವಹನ ವಿಭಾಗದ ಮಾಜಿ ಮುಖ್ಯಸ್ಥ ಎಸ್.ಆರ್.ವಿಜಯಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಐ.ಎ .ಡಿ ಯ ಸಂಶೋಧನಾ ಕೇಂದ್ರದಲ್ಲಿ ಐ.ಎ.ಡಿ ಮತ್ತು ಲಂಡನ್ನಿನ ಡೌಲಿಂಗ್ ಕ್ಲಬ್ ನ ಸಹಯೋಗದಲ್ಲಿ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಸಹ ಪ್ರಾಯೋಜಕತ್ವದಲ್ಲಿ ಆನೆಕಾಲು ಮತ್ತು ಇನ್ನಿತರ ಧೀರ್ಘಕಾಲಿಕ ಚರ್ಮರೋಗಳ ಸಾಕ್ಷ್ಯಾಧಾರಿತ ಚಿಕಿತ್ಸೆಗಳ ಬಗ್ಗೆ ಮಂಗಳವಾರದಿಂದ ಆರಂಭಗೊಂಡ 10 ನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿದರು.
ಸರ್ಕಾರಗಳ ಸಹಿತ ಉನ್ನತ ವಲಯಗಳಲ್ಲಿ ಬಡಜನರ ರೋಗವೆಂದು ನಿರ್ಲಕ್ಷಿಸಲ್ಪಟ್ಟಿರುವ ಆನೆಕಾಲು ರೋಗ ಚಿಕಿತ್ಸೆಗಾಗಿ ಐ. ಎ.ಡಿ ಯು ಅಭಿವೃದ್ಧಿಪಡಿಸಿರುವ ಸಂಯೋಜಿತ ಚಿಕಿತ್ಸೆಯ ಪ್ರಯೋಜನವು ಸಮಾಜದ ಅತೀ ಬಡ ರೋಗಿಗಳಿಗೂ ಲಭ್ಯವಾಗಿಸುವುದು ಇಲ್ಲಿನ ತಜ್ಞರ ತಂಡದ ಕನಸಾಗಿದೆ. ತಮ್ಮ ಕಠಿಣ ಪರಿಶ್ರಮದಿಂದ ಈ ಸಂಸ್ಥೆ ಯನ್ನು ಈ ಮಟ್ಟಕ್ಕೆ ಬೆಳೆಸಿದ ತಂಡವು ಈ ನಿಟ್ಟಿನಲ್ಲೂ ಯಶಸ್ವಿಯಾಗಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡಿದ ಶಾಸಕ ಎನ್.ಎ.ನೆಲ್ಲಿಕುನ್ನು ಅವರು, ಕಾಸರಗೋಡಿನಂತಹ, ಆರೋಗ್ಯ ರಂಗದಲ್ಲೂ ಹಿಂದುಳಿದಿರುವ ಜಿಲ್ಲೆಯಲ್ಲಿ ಆನೆಕಾಲು ರೋಗ ಚಿಕಿತ್ಸೆಯಲ್ಲಿ ಹೊಸತೊಂದು ಮೈಲುಗಲ್ಲನ್ನು ದಾಖಲಿಸಿರುವ ಐ.ಎ .ಡಿ ಯ ಸಾಧನೆ ಶ್ಲಾಘನೀಯವೇ ಸರಿ. ಸರ್ಕಾರಗಳಿಂದಲೂ ನಿರ್ಲಕ್ಷಿತ ರೋಗವೆನಿಸಿರುವ ಆನೆಕಾಲಿನ ಚಿಕಿತ್ಸೆಗೆ ಹಿಂದಿನ ನಮ್ಮ ಸರ್ಕಾರದ ಮುಂಗಡಪತ್ರದಲ್ಲಿ ಐ.ಎ.ಡಿ ಗೆ ಮೊತ್ತವನ್ನು ವೀಸಲಿಡುವಂತೆ ಮಾಡುವಲ್ಲಿ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದ್ದರೂ,ಬಿಡುಗಡೆ ಗೊಳಿಸಲು ಬಾಕಿ ಉಳಿದಿರುವ ಮೊತ್ತವನ್ನು ಆದಷ್ಟೂ ಬೇಗನೆ ಮಂಜೂರು ಮಾಡುವತ್ತ ನಾನು ಈಗಿನ ಸರ್ಕಾರಕ್ಕೆ ಮನವಿ ಸಲ್ಲಿಸುವ ಭರವಸೆಯನ್ನು ನೀಡುವೆ ಎಂದು ತಿಳಿಸಿದರು.
ಆನೆಕಾಲು ರೋಗ ಚಿಕಿತ್ಸೆಗೆ ಐ. ಏ .ಡಿ ಗೆ ಬರುವ ಬಡ ಅರ್ಹ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸ್ಥಾಪಿಸಿರುವ 'ಎಸ್ .ಜನಾರ್ಧನ್ ದತ್ತಿ ನಿಧಿ ' ಯನ್ನು ನವದೆಹಲಿಯ ಸಿಸ್ಟೊಪಿಕ್ ಲ್ಯಾಬರೇಟರಿಸ್ ನ ಅಧ್ಯಕ್ಷ ಪಿ.ಕೆ.ದತ್ತಾ ಉದ್ಘಾಟಿಸಿದರು. ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಚರ್ಮರೋಗದ ಪ್ರಾಧ್ಯಾಪಕರೂ, ಐ.ಎ .ಡಿ. ಯ ಮಾರ್ಗದರ್ಶಕರೂ ಆಗಿರುವ ಪೆÇ್ರ. ಟೆರೆನ್ಸ್ .ಜೆ.ರೆಯಾನ್ ರ ಆತ್ಮಚರಿತ್ರೆಯಾದ"'ಮೆಡಿಸಿನ್ ಆಂಡ್ ಬಾಡಿ ಇಮೇಜ್ :ರಿಸೋರ್ಸ್ ಪ್ಲಾನಿಂಗ್ ಫಾರ್ ದಿ ಪೂವರ್ " ನ್ನು ನವದೆಹಲಿಯಲ್ಲಿರುವ ಬಿಲ್ ಅಂಡ್ ಮೆಲಿಂಡಾ ಫೌಂಡೇಶನ್ ನ ಮುಖ್ಯಸ್ಥ ಡಾ. ಭೂಪೇಂದ್ರ ತ್ರಿಪಾಠಿ ಯವರು ಬಿಡುಗಡೆ ಮಾಡಿದರು. ಕೃತಿಯ ಬಗ್ಗೆ ಐಎಡಿ ನಿಧೇಶಕ ಡಾ.ಎಸ್.ಆರ್.ನರಹರಿ ಪರಿಚಯ ನೀಡಿದರು.
ಗುಜರಾತ್ ನ ಜಾಮ್ ನಗರದ ಆಯುರ್ವೇದ ಯುನಿವರ್ಸಿಟಿಯ ನಿರ್ದೇಶಕ ಪೆÇ್ರ. ಅನೂಪ್ ಥಕ್ಕರ್ ಲಂಡನ್ ನ ಚರ್ಮರೋಗ ತಜ್ಞರ ಒಕ್ಕೂಟವಾದ ಡೌಲಿಂಗ್ ಕ್ಲಬ್ ನ ಅಧ್ಯಕ್ಷ ಪೆÇ್ರ .ಅಂತೋನಿ ಬೆವ್ಲಿ ,ಜಿಲ್ಲಾ ಆರೋ ಗ್ಯಾಧಿಕಾರಿ.ಡಾ.ದಿನೇಶ್ ಕುಮಾರ್ ಏ .ಪಿ ,ಕರ್ನಾಟಕ ಆರೋಗ್ಯ ಇಲಾಖೆಯ ಟಿ.ಬಿ. ಕಾರ್ಯ ಯೋಜನೆಯ ನಿರ್ದೇಶಕರಾದ ಡಾ.ಕೆ.ಎಚ್.ಪ್ರಕಾಶ್ , ಬೆಳಗಾವಿಯ ನೇಶನಲ್ ಇನ್ಸ್ಟಿಟ್ಯೂಟ್ ಒಫ್ ಟ್ರಡಿಶನಲ್ ಮೆಡಿಸಿನ್ ನ ಹಿರಿಯ ವಿಜ್ಞಾನಿ ಡಾ. ಎಸ್ .ಎಲ್. ಹೋಟಿ ಮತ್ತು ಭಾರತ ಸರ್ಕಾರದ ಆಯುಷ್ ಇಲಾಖೆಯ ಹಿರಿಯ ಅಧಿಕಾರಿಗಳು, ಐಎಡಿ ನಿರ್ದೇಶಕ ಡಾ.ಎಸ್.ಆರ್. ನರಹರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐ. ಎ .ಡಿ ಯ ನಿರ್ದೇಶಕ ಡಾ. ಟಿ .ಎ .ಬೈಲೂರ್ ವಂದಿಸಿದರು.
ವಿಚಾರ ಸಂಕಿರಣದ ಮೊದಲನೇ ದಿನ ಲಂಡನಿನ ರೋಯಲ್ ಡರ್ಬಿ ಹಾಸ್ಪಿಟಲ್ ನ ಲಿಂಪೋಡಿಮಾ ತಜ್ಞ ಪೆÇ್ರ. ವಾಘನ್ ಕೀಲೆ , ಐ.ಎ .ಡಿ ಯ ಆಯುರ್ವೇದ ತಜ್ಞೆ ಡಾ. ರೂಪಾ ಕಾಮತ್ ,ಮುಂಬಯಿಯ ಡಾ.ಚಂದ್ರಕಾಂತ್ ರೇವಂಕರ್ ಮುಂತಾದವರು ಆನೆಕಾಲು ರೋಗದ ಚಿಕಿತ್ಸೆಯ ವಿವಿಧ ಆಯಾಮಗಳ ಕುರಿತು ವಿಚಾರ ಸಂಕಿರಣ ಮತ್ತು ಚರ್ಚೆಗಳನ್ನು ನಡೆಸಿದರು. ದೇಶಾದ್ಯಾಂತ ದಿಂದ ಚಿಕಿತ್ಸೆಗೆ ಆಗಮಿಸಿದ ಆನೆಕಾಲು ರೋಗಿಗಳೊಂದಿಗೆ ತಜ್ಞರುಗಳು ಚಿಕಿತ್ಸೆಗಳ ಕುರಿತು ಪರಾಮರ್ಶೆ ನಡೆಸಿದರು.