ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಾಸರಗೋಡು ತಾಲೂಕು ದೂರು ಪರಿಹಾರ ಅದಾಲತ್ ನಡೆಯಿತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಮೂರನೇ ಅದಾಲತ್ ಇದಾಗಿದೆ.
ಒಟ್ಟು 113 ಅಹವಾಲುಗಳನ್ನು ಪರಿಶೀಲಿಸಲಾಗಿತ್ತು. 98 ದೂರುಗಳಿಗೆ ತೀರ್ಪು ಒದಗಿಸಲಾಗಿದೆ. ಉಳಿದ 10 ದೂರುಗಳ ಬಗ್ಗೆ ಆಯಾ ಇಲಾಖೆಗಳು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸೂಕ್ತ ಅರ್ಹತೆಯಿಲ್ಲದ 5 ದೂರುಗಳನ್ನು ತಿರಸ್ಕರಿಸಲಾಗಿದೆ.
6 ಮಂದಿಗೆ ತಕ್ಷಣ ಭೂಹಕ್ಕು ಪತ್ರ ವಿತರಣೆ ನಡೆಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ತಾಂತ್ರಿಕ ಕಾರಣಗಳನ್ನು ತಿಳಿಸಿನಿಷೇಧಿಸಲಾದ ಮಂದಿಗೆ ತಕ್ಷಣ ಭೂಹಕ್ಕು ಪತ್ರ ಒದಗಿಸುವಂತೆ ಜಿಲ್ಲಾಧಿಕಾರಿ ತಹಸೀಲ್ದಾರರಿಗೆ ಆದೇಶಿಸಿದರು.
ಅದಾಲತ್ ವೇಳೆ ಜಿಲ್ಲಾಧಿಕಾರಿಗೆ 53 ದೂರುಗಳು ನೇರವಾಗಿ ಲಭಿಸಿದ್ದುವು. ಇವುಗಳೂ ಸೇರಿದಂತೆ 98 ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. ಭೂರಹಿತರಿಲ್ಲದ ಕೇರಳ ಯೋಜನೆ ಸಂಬಂಧ ಜಾಗದ ಸಮಸ್ಯೆ, ಆದ್ಯತೆ ವಿಭಾಗದಲ್ಲಿ ಪಡಿತರ ಚೀಟಿಗೆ ಅರ್ಜಿ, ವಸತಿ ನಿರ್ಮಾಣಕ್ಕೆ ಆರ್ಥಿಕ ಸಹಾಯಕ್ಕೆ ಅರ್ಜಿ, ಬ್ಯಾಂಕ್ ಸಾಲ ಮನ್ನಾ ಸಂಬಂಧ ಅರ್ಜಿ ಸಹಿತ ದೂರುಗಳು ಅಧಿಕವಾಗಿದ್ದುವು.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯ ಕಂದಾಯಾಧಿಕಾರಿ ಕೆ.ರವಿಕುಮಾರ್, ಕಾಸರಗೋಡು ತಹಸೀಲ್ದಾರ್ ರಾಜನ್, ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ವಿವಿಧ ಇಲಾಖೆಗಳ ಸಿಬ್ಬಂದಿ, ಗ್ರಾಮಾಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕರ ಸಹಾಯಕ್ಕಾಗಿ ವಿವಿಧ ಇಲಾಖೆಗಳ ಸ್ಟಾಲ್ ಗಳೂ ಇದ್ದುವು.