ಕಾಸರಗೋಡು: ಜಿಲ್ಲಾಪಂಚಾಯಿತಿ ವಠಾರದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಕಾಂಕ್ರೀಟ್ ಪ್ರತಿಮೆ ಕಾಮಗಾರಿ ಜಿಲ್ಲೆಯ ಎಂಡೋ ಸಂತ್ರಸ್ತರನ್ನು ಅಣಕಿಸುತ್ತಿದೆ. ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಕಣ್ಣೀರ ಜೀವನ ಪ್ರತಿಬಿಂಬಿಸುವ ರೀತಿಯಲ್ಲಿ ಕಾಂಕ್ರೀಟ್ ಶಿಲ್ಪ ರಚಿಸಲು 2008ರಲ್ಲಿ ಜಿಲ್ಲಾಪಂಚಾಯಿತಿಯ ಅಂದಿನ ಆಡಳಿತ ಸಮಿತಿ ಮುಂದಾಗಿದ್ದು, ಇದಕ್ಕಾಗಿ 20ಲಕ್ಷ ರೂ. ಮೀಸಲಿರಿಸಿತ್ತು. ಪ್ರತಿಮೆ ನಿರ್ಮಾನಕ್ಕಾಗಿ ಪ್ರಸಿದ್ಧ ಕಾಂಕ್ರೀಟ್ ಶಿಲ್ಪಿ ಕಾನಾಯಿ ಕುಞÂರಾಮನ್ ಅವರಿಗೆ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಆದರೆ 12ವರ್ಷ ದಾಟಿದರೂ ಪ್ರತಿಮೆಗೆ ಉದ್ಘಾಟನೆ ಭಾಗ್ಯ ಲಭಿಸಲೇ ಇಲ್ಲ.
ಕಾಮಗಾರಿ ಶೇ. 50ರಿಂದ ಹೆಚ್ಚು ಕೆಲಸ ನಡೆದಿದ್ದರೂ, ಇದರ ಕೆಲಸವನ್ನು ಪೂರ್ತಿಗೊಳಿಸುವಲ್ಲಿ ಜಿಪಂ ಆಡಳಿತ ವಿಳಂಬ ಧೋರಣೆ ಅನುಸರಿಸುತ್ತಲೇ ಬಂದಿದೆ. ಯೋಜನೆ ಆರಂಭಿಸಿದಂದಿನಿಂದ ಎರಡು ಬಾರಿ ಎಡರಂಗ ಹಾಗೂ ಪ್ರಸಕ್ತ ಐಕ್ಯರಂಗ ಜಿಪಂನಲ್ಲಿ ಆಡಳಿತ ನಡೆಸುತ್ತಿದೆ.
ಒಂದೆಡೆ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ತಮ್ಮ ಸವಲತ್ತಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಲೇ ಇದ್ದರೆ, ಇತ್ತ ಎಂಡೋ ಸಂತ್ರಸ್ತರ ನೋವಿನ ಪ್ರತೀಕವಾಗಿ ನಿರ್ಮಿಸಲುದ್ದೇಶಿಸಿರುವ ಶಿಲ್ಪಕಲೆ ಹನ್ನೆರಡು ವರ್ಷ ಕಳೆದರೂ ಪೂರ್ತಿಗೊಳ್ಳದಿರುವುದು ವಿಷಾದನೀಯ ಎಂಬುದಾಗಿ ಸಾರ್ವಜನಿಕರು ತಿಳಿಸುತ್ತಾರೆ.
ಜಿಲ್ಲಾ ಪಂಚಾಯಿತಿಯ ಅಂದಿನ ಅಧ್ಯಕ್ಷ ಎಂ.ವಿ ಬಾಲಕೃಷ್ಣನ್ ಅವರ ಆಡಳಿತಾವಧಿಯಲ್ಲಿ 20ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಶಿಲ್ಪದ ಕಾಮಗಾರಿ ಆರಂಭಿಸಲಾಗಿತ್ತು. ಇದರಲ್ಲಿ ಸುಮಾರು 17ಲಕ್ಷ ರೂ. ವ್ಯಯಿಸಲಾಗಿದೆ. ನಂತರ ಕಾಮಗಾರಿ ವಿಳಂಬವಾಗುತ್ತಿದ್ದಂತೆ ನಿರ್ಮಾಣ ವೆಚ್ಚವೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂದು ಇದರ ಬಜೆಟ್ 40ಲಕ್ಷಕ್ಕೇರಿದೆ. ಶಿಲ್ಪಿ ಕಾನಾಯಿ ಕುಞÂರಾಮನ್ ಅವರ ಕೆಲಸದ ಒತ್ತಡದಿಂದ ಕಾಮಗಾರಿ ಸಕಾಲಕ್ಕೆ ಪೂರೈಸಲು ಸಾಧ್ಯವಾಗಿಲ್ಲ ಎಂಬುದು ಜಿಪಂ ಅಧಿಕಾರಿಗಳ ಹೇಳಿಕೆಯಾಗಿದೆ. ನಿರ್ಮಾನಕ್ಕಿರುವ ಮೊತ್ತ ಸಕಾಲಕ್ಕೆ ಪೂರೈಸದಿರುವುದು ವಿಳಂಬಕ್ಕೆ ಕಾರಣವೆಂಬ ಮಾತೂ ಕೇಳಿ ಬರುತ್ತಿದೆ. ಜಿಲ್ಲೆಯ ಜನತೆಯ ಹೋರಾಟ ಹಾಗೂ ಎಂಡೋ ಸಂತ್ರಸ್ತ ತಾಯಂದಿರು ತಮ್ಮ ಸಂತ್ರಸ್ತ ಮಕ್ಕಳೊಂದಿಗೆ ಇರುವ ಚಿತ್ರಗಳನ್ನು ಪ್ರತಿಬಿಂಬಿಸುವ ಬೃಹತ್ ಕಾಂಕ್ರೀಟ್ ಶಿಲ್ಪ ಇದಾಗಿದೆ.
ಯೋಜನೆ ವಿಳಂಬದಿಂದಾಗಿ ಜಿಲ್ಲಾ ಪಂಚಾಯಿತಿಗೆ ಆರ್ಥಿಕ ಹೊರೆಯೂ ಹೆಚ್ಚಾಗುತ್ತಾ ಸಾಗಿದೆ. ನಿಗದಿತ ಕಾಲಮಿತಿಯೊಳಗೆಯೋಜನೆ ಪೂರ್ತಿಗೊಳಿಸದೆ, ಬಡಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿರುವ ಜಿಪಂ ಆಡಳಿತದ ಬಗ್ಗೆ ಜನತೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಭಿಮತ:
ಕಾಂಕ್ರೀಟ್ ಶಿಲ್ಪ ನಿರ್ಮಾಣ ಕಾಮಗಾರಿ ಪೂರ್ತಿಗೊಳಿಸಲು 20ಲಕ್ಷ ರೂ. ಮೀಸಲಿರಿಸಲಾಗಿದೆ. ಕಾಮಗಾರಿ ಶೀಘ್ರ ಆರಂಭಿಸುವ ಬಗ್ಗೆ ಶಿಲ್ಪಿ ಕಾನಾಯಿ ಕುಞÂರಾಮನ್ ಅವರನ್ನು ಕೇಳಿಕೊಳ್ಳಲಾಗಿದೆ. ಫೆಬ್ರವರಿ ಮಾಸಾಂತ್ಯದೊಳಗೆ ಕಾಮಗಾರಿ ಮತ್ತೆ ಆರಂಭಿಸುವ ಭರವಸೆ ನೀಡಿದ್ದಾರೆ. ಕೆಲಸ ಪೂರ್ತಿಗೊಳಿಸಲು ಜಿಪಂ ಆದ್ಯತೆ ನೀಡಲಿದೆ.
ಎ.ಜಿ.ಸಿ ಬಶೀರ್, ಅಧ್ಯಕ್ಷ
ಕಾಸರಗೋಡು ಜಿಲ್ಲಾ ಪಂಚಾಯಿತಿ