ಮುಳ್ಳೇರಿಯ: ಎಂಡೋಸಲ್ಪಾನ್ ಸಂತ್ರಸ್ತರ ಪುನರ್ವಸತಿಗಾಗಿ ಮುಳಿಯಾರು ಗ್ರಾಮ ಪಂಚಾಯತಿನಲ್ಲಿ ಸ್ಥಾಪಿಸುವ ಪುನರ್ವಸತಿ ಗ್ರಾಮಕ್ಕೆ ಮಾರ್ಚ್ 14 ರಂದು ಶಿಲಾನ್ಯಾಸ ನಡೆಯಲಿದೆ.
ಈ ಯೋಜನೆಗೆ ಪ್ರಥಮ ಹಂತದಲ್ಲಿ 4.9 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.
ನಿಘ್ನರಿ ತಾಂತ್ರಿಕ ಸಹಾಯದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುವುದು. ಇದು ಒಟ್ಟು 58.75 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಎಂಡೋಸಲ್ಪಾನ್ ಸಂತ್ರಸ್ತ ವಲಯಗಳಲ್ಲಿರುವ ಪತ್ರೀ ಶಾಲೆಗಳನ್ನು ಮಾದರಿ ಶಿಶು ಪುನರ್ವಸತಿ ಕೇಂದ್ರಗಳಾಗಿ ಭಡ್ತಿಗೊಳಿಸಲಾಗುತ್ತಿದ್ದು, ಅವುಗಳ ಉದ್ಘಾಟನೆ ಮಾ.14 ರಂದು ನಡೆಯಲಿದೆ. ಪ್ರಥಮ ಹಂತದಲ್ಲಿ ಕೆಲಸ ಪೂರ್ಣಗೊಂಡ ನಾಲ್ಕು ಶಾಲೆಗಳನ್ನು ಸಾಮಾಜಿಕ ಸುರಕ್ಷಾ ಮಿಷನ್ ವಹಿಸಿಕೊಂಡು ಅವುಗಳನ್ನು ಶಿಶು ಪುನರ್ವಸತಿ ಕೇಂದ್ರಗಳನ್ನಾಗಿ ಭಡ್ತಿಗೊಳಿಸಲಿದೆ. ಕಾಸರಗೋಡು ಜಿಲ್ಲೆಯ ಮುಳಿಯಾರು, ಕಾರಡ್ಕ, ಚೀಮೇನಿ ಕಯ್ಯಾರು ಮತ್ತು ಕುಂಬ್ಡಾಜೆ ಎಂಬೆಡೆಗಳಲ್ಲಿರುವ ಇಂತಹ ಶಾಲೆಗಳನ್ನು ಶಿಶು ಪುನರ್ವಸತಿ ಕೇಂದ್ರಗಳನ್ನಾಗಿ ಭಡ್ತಿಗೊಳಿಸಲಾಗುವುದು.