ಪೆರ್ಲ: ಯಕ್ಷಗಾನದಂತಹ ಸಾಂಸ್ಕøತಿಕತೆಗೆ ಸಾಮಾಜಿಕ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವ, ಸಮಾಜವನ್ನು ಸತ್ಪಥದತ್ತ ಮುನ್ನಡೆಸುವ ಶಕ್ತಿ-ಯುಕ್ತಿ ಅಡಗಿದೆ. ಮಣ್ಣಿನ ಪರಂಪರೆ ಎಂದಿಗೂ ಸುಸ್ಥಿರತೆಯನ್ನು ಉಂಟುಮಾಡುವುದೇ ಹೊರತು ಅಸ್ಥಿರತೆಯನ್ನು ಅಲ್ಲ ಎಂದು ಪೆರ್ಲ ಸತ್ಯನಾರಾಯಣ ಫ್ರೌಢಶಾಲಾ ಮುಖ್ಯೋಪಾಧ್ಯಾಯ ಬಿ.ರಾಜೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 15ನೇ ವಾರ್ಷಿಕೋತ್ಸವ, ಪಡ್ರೆ ಚಂದು ಜನ್ಮ ಶತಮಾನೋತ್ಸವ ವಿಚಾರ ಸಂಕಿರಣ, ಸಂಸ್ಮರಣೆ, ನೂರರ ಅಭಿನಂದನೆ, ಪ್ರಶಸ್ತಿ ಪ್ರದಾನ ಸಮಾರಂಭ, ಮಕ್ಕಳ ಯಕ್ಷಗಾನ ಬಯಲಾಟದ ಶನಿವಾರ ಪೆರ್ಲದ ಪಡ್ರೆಚಂದು ಸ್ಮಾರಕ ಕೇಂದ್ರದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಸ ತಲೆಮಾರು ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿರುವುದು ಗಮನಾರ್ಹವಾದರೂ ಪರಂಪರೆಯ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಅಗತ್ಯ ಇದೆ. ಶ್ರೀಮಂತ ಯಕ್ಷಗಾನ ಪರಂಪರೆಯ ಅನುಸರಣೆ-ರಂಗ ಸಾಕ್ಷಾತ್ಕಾರದಿಂದ ಅದು ಇನ್ನಷ್ಟು ಪ್ರಖರತೆ ಹೊಂದುವುದು. ಜೊತೆಗೆ ಪ್ರಸಂಗ ಸಾಹಿತ್ಯ-ಪ್ರಸಂಗಗಳ ಮೂಲ ಸ್ವರೂಪಗಳ ಅಧ್ಯಯನಕ್ಕೂ ತೊಡಗಿಸಿಕೊಳ್ಳಬೇಕು ಎಂದು ಅವರು ಈ ಸಂದರ್ಭ ಕರೆನೀಡಿದರು.
ಖ್ಯಾತ ಭರತನಾಟ್ಯ ಶಿಕ್ಷಕಿ, ಉಡುಪಮೂಲೆ ಭೂಮಿಕಾ ಪ್ರತಿಷ್ಠಾನದ ಸಂಚಾಲಕಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಯಕ್ಷಗಾನ ಸಹಿತ ಎಲ್ಲಾ ರಂಗಕಲೆಗಳಲ್ಲಿ ವರ್ತಮಾನದಲ್ಲೂ ಗುರುಪರಂರೆಗೆ ಮಹತ್ವದ ಸ್ಥಾನಮಾನ ನೀಡಿ ಮುಂದುವರಿಯುತ್ತಿದೆ. ಇಂತಹ ಗುರುಪರಂಪರೆಯಿಂದ ಮೂಡಿಬಂದಿರುವ ವಿಶಿಷ್ಟ ಕಲಾ ಪ್ರಕಾರಗಳನ್ನು ಪರಂಪರೆ, ಕಲಾ ಸ್ವರೂಪದ ಮೂಲ ತತ್ವಗಳಿಗೆ ಧಕ್ಕೆ ಬಾರದಂತೆ ಮುನ್ನಡೆಸುವ ಹೊಣೆಗಾರಿಕೆಯನ್ನು ಯುವ ಸಮೂಹ ಪಾಲಿಸುವ ಪಣ ತೊಟ್ಟಿರಬೇಕು ಎಂದರು.
ಕೂಡ್ಲು ಕುತ್ಯಾಳ ಶ್ರೀಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಅಡಿಗ ಸೂರ್ಲು, ಮೊಂಟೆಪದವು ಶ್ರೀಶಾರದಾಕೃಷ್ಣ ಯಕ್ಷಗಾನ ಸಂಘದ ಸಂಚಾಲಕ ಅರವಿಂದ ಮಾಸ್ತರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಅವರಿಗೆ ಪಡ್ರೆಚಂದು ನೂರರ ನೆನಪು ಅಭಿನಂದನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಧ್ಯಾಪಕ, ಭಾಗವತ ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಅಭಿನಂದನಾ ಭಾಷಣಗೈದರು. ಪುತ್ತೂರು ಸತ್ಯಶಾಂತಾ ಪ್ರತಿಷ್ಠಾನದ ಸಂಚಾಲಕಿ, ಕವಯಿತ್ರಿ ಶಾಂತಾ ಕುಂಠಿನಿ ಅವರು ಅಭಿನಂದಿಸಿದರು. ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ಸರಸ್ವತೀ ಪ್ರಸನ್ನ ಅವರಿಗೆ ಬಾಲಕೃಷ್ಣ ಏಳ್ಕಾನ ಈ ಸಂದರ್ಭ ಗುರುವಂದನೆ ಸಲ್ಲಿಸಿದರು. ಪನೆಯಾಲ ರಾಮಚಂದ್ರ ಭಟ್, ವೇದಮೂರ್ತಿ ರಾಘವೇಂದ್ರ ಉಡುಪಮೂಲೆ ಉಪಸ್ಥಿತರಿದ್ದರು. ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಅಧ್ಯಕ್ಷ ಪ್ರಾಚಾರ್ಯ ಸಬ್ಬಣಕೋಡಿ ರಾಮ ಭಟ್ ಸ್ವಾಗತಿಸಿ, ವಂದಿಸಿದರು.
ಬಳಿಕ ರಾತ್ರಿ 8 ರಿಂದ ಗೋಳಿಕಟ್ಟೆ ಓಂ ಶ್ರೀಕಲಾಕ್ಷೇತ್ರ ವಿದ್ಯಾರ್ಥಿಗಳ ಪೂರ್ವರಂಗ, ರಾತ್ರಿ 9 ಕ್ಕೆ ಸಬ್ಬಣಕೋಡಿ ರಾಮ್ ಭಟ್ ನಿರ್ದೇಶನದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಕೃಷ್ಣ ಮಕ್ಕಳ ಮೇಳದ 'ಶಶಿಪ್ರಭಾ ಪರಿಣಯ-ಗರುಡ ಗರ್ವಭಂಗ' ಯಕ್ಷಗಾನ ಬಯಲಾಟ, 11ರಿಂದ ಮೊಂಟೆಪದವು ಶ್ರೀ ಶಾರದಾಕೃಷ್ಣ ಯಕ್ಷಗಾನ ಸಂಘದವರಿಂದ 'ಮೀನಾಕ್ಷಿ ಕಲ್ಯಾಣ-ಕುಶಲವ', 1ರಿಂದ ಕುರ್ನಾಡು ದತ್ತಾತ್ರೇಯ ಯಕ್ಷಗಾನ ಮಂಡಳಿಯ 'ಸುದರ್ಶನ ವಿಜಯ', 3ರಿಂದ ಪಡ್ರೆ ಚಂದು ಸ್ಮಾರಕ ಕೇಂದ್ರದ ವಿದ್ಯಾರ್ಥಿಗಳಿಂದ 'ಅನುಸಾಲ್ವ ಕಾಳಗ-ನರಕಾಸುರ ಮೋಕ್ಷ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಶನಿವಾರ ಬೆಳಗ್ಗೆ 10ಕ್ಕೆ ಶ್ರೀ ಗಣಪತಿ ಹೋಮ ನಡೆಯಿತು.
ಫೆ.28ರಂದು ಪಡ್ರೆ ಚಂದು ಸಂಸ್ಮರಣೆ, ನೂರರ ನೆನಪು ಪ್ರಶಸ್ತಿ ಸಭಾ ಕಾರ್ಯಕ್ರಮ ನಡೆಯಲಿದೆ.ಸಾಹಿತಿ ಡಾ.ಎಸ್.ಎನ್.ಭಟ್ ಪೆರ್ಲ ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ಪತ್ತಡ್ಕ ಗಣಪತಿ ಭಟ್ ಅಧ್ಯಕ್ಷತೆ ವಹಿಸುವರು.ಯಕ್ಷಗಾನ ಕಲಾವಿದ, ಉಪನ್ಯಾಸಕ ಎನ್.ಕೆ.ರಾಮಚಂದ್ರ ಭಟ್ ಪನೆಯಾಲ, ರಾಜಾರಾಂ ಪೆರ್ಲ ಉಪಸ್ಥಿತರಿರುವರು.
ಭಾಗವತರಾದ ಹೊಸಮೂಲೆ ಗಣೇಶ ಭಟ್, ಡಾ.ಸತೀಶ್ ಪುಣಿಂಚತ್ತಾಯ, ಡಾ.ಸತ್ಯನಾರಾಯಣ ಪುಣಿಂಚತ್ತಾಯ, ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ,ಹಿಮ್ಮೇಳ ವಾದಕ, ಯಕ್ಷರತ್ನ ರಾಘವ ಬಲ್ಲಾಳ್ ಕಾರಡ್ಕ ಅವರಿಗೆ 'ಪಡ್ರೆ ಚಂದು' ನೂರರ ನೆನಪು, ಅಭಿನಂದನೆ ಕಾರ್ಯಕ್ರಮ, ರಾತ್ರಿ 8ರಿಂದ ಚಿನ್ಮಯ ಕಲಾಕೇಂದ್ರ ಮೂಡಬಿದಿರೆ ವಿದ್ಯಾರ್ಥಿಗಳ 'ಬಬ್ರುವಾಹನ-ವೀರವರ್ಮ ಕಾಳಗ' 10.30ರಿಂದ ಕೇಂದ್ರದ ವಿದ್ಯಾರ್ಥಿಗಳ 'ಮದನಾಕ್ಷಿ ತಾರಾವಳಿ-ಗರುಡ ಗರ್ವಭಂಗ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.