ಉಪ್ಪಳ: ಸುನ್ನಿ ದಾವತ್ತೆ ಇಸ್ಲಾಮಿ ಉಪ್ಪಳ ಘಟಕ ಇದರ 19 ನೇ ವಾರ್ಷಿಕೋತ್ಸವದಂಗವಾಗಿ ಸುನ್ನಿ ಇಜ್ತಿಮಾವನ್ನು ಹಮ್ಮಿಕೊಳ್ಳಲಾಯಿತು.
ಉಪ್ಪಳ ಹನಫಿ ಬಜಾರ್ ಮರಿಕೆ ಪ್ಲಾಜಾ ದಲ್ಲಿ ಹಾಜಿ ಕೆ ಎಸ್ ಹುಸೈನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಶ್ವ ಇಸ್ಲಾಮಿಕ್ ಮಿಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಪಂಡಿತ ಶಿರೋಮಣಿ ಅಲ್ಲಾಮ ಖಮರುಸ್ಸಮಾನ್ ಅಝ್ಮಿ ಲಂಡನ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಇಂದು ಮುಸ್ಲಿಂ ಸಮುದಾಯ ಬಹಳ ಅಪಾಯದ ಸ್ಥಿತಿಯನ್ನು ಎದುರಿಸುತ್ತಿದೆ. ನಾವು ಅಲ್ಲಾವುವಿನಲ್ಲಿ ಹಾಗೂ ಅವನ ಔಲಿಯಾಗಳಲ್ಲಿ ಭರವಸೆಗಳನ್ನಿಟ್ಟು ಮುನ್ನಡೆಯಬೇಕಾಗಿದೆ. ಶೈಕ್ಷಣಿಕ ರಂಗದಲ್ಲೂ ಅದೇ ರೀತಿ ಇತರ ಚಟುವಟಿಕೆಗಳಲ್ಲೂ ಯುವ ಸಮೂಹಕ್ಕೆ ಪ್ರೋತ್ಸಾಹವನ್ನು ನೀಡಿ ಉತ್ತಮ ಭಾರತೀಯರಾಗುವಂತೆ ಮಾಡಬೇಕಾಗಿದೆ. ನಮ್ಮ ಉತ್ತಮ ಚಟುವಟಿಕೆಗಳು ಇತರರಿಗೆ ಮಾರ್ಗದರ್ಶಕವಾಗಬೇಕಾಗಿದೆ. ಅಲ್ಲಾಹನನ್ನು ರಸೂಲ್ ನನ್ನು ಹಾಗೂ ಅತನ ಔಲಿಯಾಗಳನ್ನು ಪ್ರೀತಿಸುವ ಉತ್ತಮ ಉಮ್ಮತಿಯಾಗಲು ನಮ್ಮೆಲ್ಲರನ್ನು ಪರಮ ದಯಮನಾದ ಅಲ್ಲಾವು ಅನುಗ್ರಹಿಸಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಮುಖ್ಯ ಪ್ರಭಾಷಣವನ್ನು ಮಾಡಿದ ಅಮೀರ್ ಸುನ್ನಿ ದಾವತ್ತೆ ಇಸ್ಲಾಮಿ ಮುಂಬೈ ಘಟಕದ ವಾಗ್ಮಿ ಮೌಲಾನಾ ಶಾಕಿರ್ ನೂರಿ ಮಾತನಾಡಿ ಹಾರೈಸಿದರು. ಬಳಿಕ ವೇದಿಕೆಯಲ್ಲಿ ಖುರಾನ್ ಗ್ರಂಥವನ್ನು ಪೂರ್ಣವಾಗಿ ಕಂಠ ಪಾಠ ಮಾಡಿದ ಏಳು ವಿದ್ಯಾರ್ಥಿಗಳಿಗೆ ಹಾಫಿಝ್ ಬಿರುದನ್ನು ನೀಡಿ ಗೌರವಿಸಲಾಯಿತು. ಇಜ್ತಿಮಾದಂಗವಾಗಿ ಪ್ರವಾದಿ ಮಹಮ್ಮದರನ್ನು ಹೊಗಳುವ ಸ್ವಲಾತುಗಳು ಮೊಳಗಿದವು. ಸಯ್ಯದ್ ತೌಫೀಕ್, ಅಫೀಝ್ ಮುಸ್ತಾಕ್, ಅಫೀಝುರಹಿಮಾನ್, ಅಕ್ಬರ್ ಬಿ ಎಸ್, ಅಜೀಂ ಮಣಿಮುಂಡ, ಮೊಹಮ್ಮದ್ ನಿಝಾಂ ಮೊದಲಾದವರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಕಾರ್ಯಕ್ರಮವನ್ನು ವೀಕ್ಷಿಸಲು ವಿವಿಧ ಪ್ರದೇಶಗಳಿಂದ ಸಹಸ್ರಾರು ಮಂದಿ ಆಗಮಿಸಿದ್ದರು.