ಪೆರ್ಲ: ಗಡಿನಾಡಿನ ಗಡಿ ಕಾಟುಕುಕ್ಕೆ ಪರಿಸರ ಕಲಾ,ಸಾಂಸ್ಕøತಿಕ ಕ್ಷೇತ್ರದ ಪ್ರತಿಭೆಗಳ ಊರಾಗಿದ್ದು, ಇಲ್ಲಿಂದುದಿಸಿದ ಬಹುಮುಖ ಪ್ರತಿಭೆ ಕು| ಶ್ರಾವಣಿ ಕಾಟುಕುಕ್ಕೆ ಇವಳಿಂದ ಫೆ. 20ರಂದು ಕಾಟುಕುಕ್ಕೆಯಲ್ಲಿ ನಡೆಯುವ ಸಾಲಿಗ್ರಮ ಮೇಳದ ಯಕ್ಷಗಾನದ ರಂಗಸ್ಥಳದಲ್ಲಿ ಗುರುವಂದನೆ ನಡೆಯಲಿದೆ. ಯಕ್ಷಗಾನ, ಸಂಗೀತ, ಭರತನಾಟ್ಯ ಕ್ಷೇತ್ರದಲ್ಲಿ ತನ್ನ ಏಳಿಗೆಗೆ ಆಶೀರ್ವದಿಸಿದ ಗುರುಗಳನ್ನು ಸಾರ್ವಜನಿಕವಾಗಿ ಗುರುವಂದನೆಯೊಂದಿಗೆ ಗೌರವಿಸುವುದು ಕಾರ್ಯಕ್ರಮದ ಧ್ಯೇಯ.
ಬಡಗುತಿಟ್ಟಿನ ಜನಪ್ರಿಯ ಮೇಳವಾದ ಸಾಲಿಗ್ರಾಮ ಮೇಳವು ಇದೇ ಮೊದಲಬಾರಿಗೆ ಕಾಟುಕುಕ್ಕೆಯಲ್ಲಿ ಪ್ರದರ್ಶನ ನೀಡುತ್ತಿದ್ದು, ಈ ವರ್ಷದ ಅತ್ಯಂತ ಜನಪ್ರಿಯ ಪ್ರಸಂಗವಾದ "ಚಂದ್ರಮುಖಿ-ಸೂರ್ಯಸಖಿ' ಪ್ರಸಂಗವು ಫೆ.20ರಂದು ರಾತ್ರಿ 9ರಿಂದ ಕಾಟುಕುಕ್ಕೆ ಕ್ಷೇತ್ರ ಪರಿಸರದಲ್ಲಿ ನಡೆಯಲಿದೆ. ಈ ಸಂದರ್ಭ ಶ್ರಾವಣಿಯ ಯಕ್ಷಗಾನ ಗುರುಗಳಾದ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್, ಭರತನಾಟ್ಯ ಶಿಕ್ಷಕಿ, ನಾಟ್ಯವಿದುಷಿ ಕಾವ್ಯಾಭಟ್, ಶಾಸ್ತ್ರೀಯ ಸಂಗೀತ ಶಿಕ್ಷಕಿ ಅನುರಾಧಾ ಭಟ್ ಅಡ್ಕಸ್ಥಳ ಇವರಿಗೆ ಗಣ್ಯ ಅತಿಥಿಗಳ ಸಮಕ್ಷಮ ಅಭಿವಂದನೆಗಳೊಂದಿಗೆ ಗುರುವಂದನೆ ಜರಗಲಿದೆ.
ಯಕ್ಷಗಾನ, ಭರತನಾಟ್ಯ, ಸಂಗೀತ ಕ್ಷೇತ್ರದ ಹೊರತಾಗಿ ಚಿತ್ರಕಲೆ, ಬರವಣಿಗೆ, ಭಜನಾ ಕ್ಷೇತ್ರದಲ್ಲೂ ಆಸಕ್ತಳಾಗಿ ಸೃಜನಶೀಲ ಚಟುವಟಿಕೆಗಳೊಂದಿಗೆ ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿರುವ ಶ್ರಾವಣಿ ಪ್ರಸ್ತುತ ವಿಟ್ಲದ ಜೇಸೀಸ್ ಆಂಗ್ಲಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಕಾಟುಕುಕ್ಕೆ ಕ್ಷೇತ್ರ ಸಿಬ್ಬಂದಿ ಶಿವಪ್ರಸಾದ್ ರಾವ್ ಮತ್ತು ವೀಣಾ ದಂಪತಿಯ ಪುತ್ರಯಾದ ಈಕೆ ಎಳವೆಯಲ್ಲೇ ಬಹುಮುಖೀ ಅಭಿರುಚಿಗಳ ಆಸಕ್ತಳು. ವಿದುಷಿ ಕಾವ್ಯಾಭಟ್ ಪೆರ್ಲ ಅವರ ಬಳಿ 8ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಂದ ತೇರ್ಗಡೆಯಾಗಿ ಪ್ರಸ್ತುತ ಸೀನಿಯರ್ ಹಣತದ ಸಿದ್ಧತೆಯಲ್ಲಿದ್ದು, ಅನೇಕ ಕಡೆ ಪ್ರದರ್ಶನವಿತ್ತು ಪ್ರಶಂಸೆ ಪಡೆದಿದ್ದಾಳೆ.
ಯಕ್ಷಗಾನದಲ್ಲಿ ವಿಶೇಷ ಒಲವಿನ ಆಸಕ್ತಿಯನ್ನು ಹೊಂದಿ ಗುರು ಸಭ್ಭಣಕೋಡಿಯವರ ಶಿಷ್ಯೆಯಾಗಿ ಈಗಾಗಲೇ ಎಲ್ಲಾ ಬಗೆಯ ಪಾತ್ರ ನಿರ್ವಹಣೆಯಲ್ಲಿ ನೂರಾರು ಕಡೆ ಪ್ರತಿಭಾಪ್ರದರ್ಶನವಿತ್ತು ಗಮನಸೆಳೆದಿದ್ದಾಳೆ. ಖ್ಯಾತ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಈಕೆಗೆ ಚಿಕ್ಕಪ್ಪ. ಈ ಹಿನ್ನೆಲೆಯಿಂದ ಎಳವೆಯಲ್ಲೇ ಈಕೆಗೆ ಭಜನಾಸಕ್ತಿ. ಇದನ್ನರಿತು ಮನೆಯವರು ವಿದುಷಿ ಅನುರಾಧಾ ಭಟ್ ಅಡ್ಕಸ್ಥಳ ಅವರಲ್ಲಿ ಸಂಗೀತ ಶಿಕ್ಷಣ ಕೊಡಿಸುತ್ತಿದ್ದು ಅನೇಕ ಕಡೆ ಹಾಡುವ ಮೂಲಕ ಭರವಸೆ ಮೂಡಿಸಿದ್ದಾಳೆ. ಅಲ್ಲದೆ ಕಾಟುಕುಕ್ಕೆ ಬಾಲಭಜನಾ ಸಂಗದ ಸದಸ್ಯೆಯಾಗಿಯೂ ಮುಂಚೂಣಿಯಲ್ಲಿದ್ದಾಳೆ. ಜೊತೆಗೆ ಚಿತ್ರಕಲೆ, ಪ್ರಬಂಧರಚನೆಗಳಲ್ಲಿ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಈಕೆ ಶಾಲೆಯ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಅಗ್ರಸಾಲಿನ ವಿದ್ಯಾರ್ಥಿನಿ. ಬಹುಮುಖೀ ಪ್ರತಿಭೆಯ ಶ್ರಾವಣಿಗೆ ಯಕ್ಷಗಾನದಲ್ಲಿ ಸ್ವತಸಿದ್ಧಿಯ ಪ್ರತಿಭೆಇದೆ. ಪುಂಡುವೇಷ, ಕಿರೀಟವೇಷ,ಸ್ತ್ರೀವೇಷ ಸಹಿತ ಎಲ್ಲಾ ವೇಷಗಳನ್ನು ಮಾಡುತ್ತಿರುವ ಈಕೆ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ವಿದ್ಯಾರ್ಥಿನಿ, ಕಲಾವಿದೆ. ಈಗಾಗಲೇ ಭರವಸೆ ಮೂಡಿಸಿರುವ ಉಜ್ವಲಭವಿಷ್ಯದ ಈ ಬಾಲಕಲಾವಿದೆ ತನ್ನ ಗುರುಗಳಿಗೆ ಸಲ್ಲಿಸುವ ಗುರುವಂದನೆಯ ಬಳಿಕ, ಗಡಿನಾಡಿನ ಗಡಿಯಲ್ಲಿರುವ ಕಾಟುಕುಕ್ಕೆ ಕ್ಷೇತ್ರ ಪರಿಸರದಲ್ಲಿ ಮೊದಲಬಾರಿಗೆ ಬಡಗುತಿಟ್ಟಿನ ಸಾಲಿಗ್ರಾಮ ಮೇಳದ ಈ ವರ್ಷದ ಜನಪ್ರಿಯ ಆಖ್ಯಾನ 'ಚಂದ್ರಮುಖಿ-ಸೂರ್ಯಸಖಿ' ಪ್ರದರ್ಶನಗೊಳ್ಳಲಿದೆ.