ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ಇದರ ನೇತೃತ್ವದಲ್ಲಿ ಸಾಹಿತ್ಯ ಸಾಂಸ್ಕøತಿಕ ಸಂವಾಹಕ ಸಮೂಹದ ತೃತೀಯ ವರ್ಷದ ಸಂಭ್ರಮ ವಿಶ್ವದರ್ಶನ 2020 ಭಾನುವಾರ ಹೊಸಂಗಡಿ ಸಮೀಪದ ಬಂಗ್ರಮಂಜೇಶ್ವರ ಆರ್.ಬಿ.ಸಭಾಂಗಣದಲ್ಲಿ ನಡೆಯಿತು.
ಸಮಾರಂಭವನ್ನು ಪುರೋಹಿತ ಶ್ರೀನಿವಾಸ ಆಚಾರ್ಯ ರಾಮತ್ತಮಜಲು ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜನಸಮೂಹಕ್ಕೆ ಉತ್ತಮ ಸಂದೇಶಗಳೊಂದಿಗೆ ಮಾರ್ಗದರ್ಶನ ನೀಡುವ ಶಕ್ತಿ ಸಾಹಿತ್ಯ ಬರಹಗಳಿಗಿದೆ. ಯುವಜನರು ಸಾಹಿತ್ಯ ಬರಹ, ಪುಸ್ತಕಗಳ ಓದಿನ ಮೂಲಕ ಸುಮಧುರ ಪ್ರಪಂಚಕ್ಕೆ ತೆರೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಶಸ್ತಿ ವಿಜೇತ ಸುಗಮ ಸಂಗೀತ ಕಲಾವಿದ ಬಿ.ಪಿ.ಗೋಪಾಲಕೃಷ್ಣ ಆಚಾರ್ಯ ಬೆಂಗಳೂರು ಅವರು ಮಾತನಾಡಿ, ಮೂರು ವರ್ಷಗಳಿಂದ ನಿರಂತರ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿಶ್ವಕರ್ಮ ಸಾಹಿತ್ಯ ದರ್ಶನದ ಸಾಹಿತ್ತಿಕ ಕೊಡುಗೆ ಅಪೂರ್ವವಾದುದು. ಯುವ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಸಾಹಿತ್ಯ ದರ್ಶನ ಕೈಗೊಂಡಿರುವ ಬಹುಮುಖ ಯೋಜನೆಗಳು ಸ್ತುತ್ಯರ್ಹವಾದುದು ಎಂದು ತಿಳಿಸಿದರು. ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುವ ಶಕ್ತಿಯಿರುವ ಸಾಹಿತ್ಯ ಕ್ಷೇತ್ರ ಸ್ವಪ್ರತಿಷ್ಠೆಯ ವೇದಿಕೆಯಾಗದೆ ನಾಡು-ನುಡಿ, ಸಂಸ್ಕøತಿ, ಜನಜೀವನವನ್ನು ಪ್ರೀತಿಸುವ, ಪರಸ್ಪರ ಜೊತೆಯಾಗಿ ಬಾಳುವ ಮಾರ್ಗದರ್ಶನದ ಆದರ್ಶ ಪಾಲಿಸಲಿ ಎಂದು ಕರೆನೀಡಿದರು.
ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದ ಪ್ರಧಾನ ಅರ್ಚಕ ತಿರುಮಲೇಶ ಆಚಾರ್ಯ, ಹಿರಿಯ ಸಾಹಿತಿ ಹರೀಶ ಆಚಾರ್ಯ ಕುಂಬಳೆ, ಅಂತರಾಷ್ಟ್ರೀಯ ಪ್ರವಾಸೋಧ್ಯಮ ವಿಭಾಗದ ಪ್ರಬಂಧಕ ನವೀನ ಆಚಾರ್ಯ ಕಡಂಬಾರು, ಜಗದೀಶ ಆಚಾರ್ಯ ವರ್ಕಾಡಿ, ಯಜ್ಞೇಶ ಆಚಾರ್ಯ ಆನೆಬಾಗಿಲು ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ವಿದ್ಯಾಭ್ಯಾಸದಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರತ್ನ, ಇತರ ಕ್ಷೇತ್ರದ ವಿಶೇಷ ಸಾಧಕರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ವಿತರಿಸಲಾಯಿತು. ಜೊತೆಗೆ ವಿಶ್ವಪ್ರಭಾ ಕೃತಿಯನ್ನು ಈ ಸಂದರ್ಭ ಬಿ.ಪಿ.ಗೋಪಾಲಕೃಷ್ಣ ಬಿಡುಗಡೆಗೊಳಿಸಿದರು.
ವಿಶ್ವಕರ್ಮ ಸಾಹಿತ್ಯ ದರ್ಶನದ ಸ್ಥಾಪಕ ಜಯ ಮಣಿಯಂಪಾರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತಾರಾನಾಥ ಕಡಂಬಾರ್ ವಂದಿಸಿದರು. ಗಣೇಶ ಆಚಾರ್ಯ ಜಾಲ್ಸೂರು ಹಾಗೂ ಸಂಧ್ಯಾ ಅಂಡಿಂಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ಕ್ಕೆ ಶ್ರೀಗುರು ಪ್ರೀತ್ಯರ್ಥ ವಿಶೇಷ ಪ್ರಾರ್ಥನೆ, ಸಂಗೀತ ದರ್ಶನ ಬಳಗದಿಂದ ಭಕ್ತಿಗಾನ ಸಂಕೀರ್ತನೆಗಳು ನಡೆಯಿತು. ಅಪರಾಹ್ನ ಬಹುಭಾಷಾ ಕವಿಗೋಷ್ಠಿ, ವಿಶ್ವಗಾನ ಮಂಜರಿ, ಸಾಂಸ್ಕøತಿಕ ವೈವಿಧ್ಯಗಳು, ಸಂಜೆ ಸಮಾರೋಪ ಸಮಾರಂಭ ನಡೆಯಿತು.