ಕುಂಬಳೆ: ಸಮಸ್ತ ಕನ್ನಡಿಗರ ನೇತೃತ್ವದಲ್ಲಿ ಏ.10 ರಿಂದ 12ರ ವರೆಗೆ ಸರೋವರ ಕ್ಷೇತ್ರವೆಂದೇ ಖ್ಯಾತವಾಗಿರುವ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರ ಪರಿಸರದಲ್ಲಿ ಐತಿಹಾಸಿಕವಾಗಿ ಆಯೋಜಿಸಲಾಗುವ ರಾಷ್ಟ್ರೀಯ ಕನ್ನಡ ಸಿರಿ-2020 ರಾಷ್ಟ್ರೀಯ ಕನ್ನಡ ಸಮ್ಮೇಳನದ ಯಶಸ್ವಿ ನಿರ್ವಹಣೆಗಾಗಿ ವಿವಿಧ ಸ್ತರಗಳಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಈಗಾಗಲೇ ಬೆಂಗಳೂರು, ಮಂಗಳೂರು ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗಿದೆ. ಮಿಕ್ಕುಳಿದಂತೆ ಇತರ ಹೊರನಾಡು, ಗಡಿನಾಡುಗಳಲ್ಲೂ ಸಮಿತಿಗಳ ರಚನೆ ನಡೆಯಲಿದೆ.
ಕನ್ನಡ ಸಿರಿಯ ಕೇಂದ್ರ ಸಮಿತಿಯ ವಿಶೇಷ ಅವಲೋಕನ ಸಭೆ ಮತ್ತು ಸ್ವಾಗತ ಸಮಿತಿ ರೂಪೀಕರಣ ಸಭೆಯು ಭಾನುವಾರ ಬೆಳಿಗ್ಗೆ ಕುಂಬಳೆಯಲ್ಲಿರುವ ಮಾಧವ ಪೈ ಸಭಾಂಗಣದಲ್ಲಿ ನಡೆಯಿತು. ಮಹಾಲಿಂಗೇಶ್ವರ ಭಟ್ ಎಂ.ವಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಎಸ್.ವಿ.ಭಟ್, ಪ್ರಸಾದ್ ರೈ ಕಯ್ಯಾರು, ವಿ.ಬಿ. ಕುಳಮರ್ವ, ಪ್ರಭಾವತಿ ಕೆದಿಲಾಯ ಪುಂಡೂರು, ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಕನ್ನಡ ಸಿರಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಈ ಸಂದರ್ಭ ಕನ್ನಡ ಸಿರಿಯ ಸ್ವಾಗತ ಸಮಿತಿ ಘೋಶಿಸಲಾಗಿತು. ಗೌರವಾಧ್ಯಕ್ಷರಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಅಧ್ಯಕ್ಷರಾಗಿ ಧಾರ್ಮಿಕ ಮುಂದಾಳು, ಉದ್ಯಮಿ ರಾಮ ಪ್ರಸಾದ್ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಮತ್ತು ವಿವಿಧ ಪ್ರದೇಶಗಳ ಪ್ರತಿನಿಧಿಗಳನ್ನು ಉಪಾಧ್ಯಕ್ಷರು ಮತ್ತು ಜೊತೆ ಕಾರ್ಯದರ್ಶಿಗಳನ್ನು ಆಯ್ಕೆಗೊಳಿಸಿ ಬೃಹತ್ ಸಮಿತಿ ರೂಪೀಕರಿಸಲಾಯಿತು.
ಸ್ವಾಗತ ಸಮಿತಿಯ ಮುಂದಿನ ಸಭೆ ಫೆ.20 ರಂದು ಸಂಜೆ 4ಕ್ಕೆ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ನಡೆಸಲು ಈ ಸಂದರ್ಭ ತೀರ್ಮಾನಿಸಲಾಯಿತು. ಸಭೆಯಲ್ಲಿ ಲಕ್ಷ್ಮಣ ಪ್ರಭು ಕುಂಬಳೆ ಕುಂಬಳೆ, ವೀರೇಶ್ವರ ಮಾಸ್ತರ್, ಪ್ರದೀಪ್ ಶೆಟ್ಟಿ ಬೇಳ, ನಿರಂಜನ ರೈ ಪೆರಡಾಲ, ಸೌಮ್ಯ ಪ್ರಸಾದ್ ಕಿಳಿಂಗಾರ್, ಕೀರ್ತಿ ಪಡ್ರೆ, ಟಿ.ಶಂಕರನಾರಾಯಣ ಭಟ್, ಸುಶ್ಮಿತಾ ಕುಂಬಳೆ, ಶಂಕರ ಸ್ವಾಮಿಕೃಪಾ, ಸುಜನಾ ಶಾಂತಿಪಳ್ಳ, ರಾಮ ಏದಾರ್ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ಚೆರುಗೋಳಿ ವಂದಿಸಿದರು.