ಪೆರ್ಲ:ಹಣ್ಣಾದ ಮೆಣಸಿನ ಕಾಳಿಗೂ ಹಾನಿಯಾಗದ ರೀತಿಯಲ್ಲಿ ಕಾಳು ಮೆಣಸು ಬೇರ್ಪಡಿಸುವ ಸರಳ ಯಂತ್ರ ಆವಿಷ್ಕಾರ ಕೃಷಿ ಕ್ಷೇತ್ರದ ಕೊಡುಗೆಗಾಗಿ ಪೆರ್ಲ ಸರವು ಕಾಚಿಕ್ಕಾಡುವಿನ ಕೃಷಿಕ ಎಸ್. ಗೋಪಾಲಕೃಷ್ಣ ಶರ್ಮ ಅವರ 'ವಿನ್ ಪೆಟ್ ಪೆಪ್ಪರ್ ಥ್ರೆಶರ್' ವಿನೂತನ ಆವಿಷ್ಕಾರಕ್ಕೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐ.ಎ.ಆರ್.ಐ) 'ಇನೋವೇಟಿವ್ ಫಾರ್ಮರ್ ಅವಾರ್ಡ್-2020' ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಹೊಸದಿಲ್ಲಿ ಐ.ಎ.ಆರ್.ಐ.ಮೇಳ ಮೈದಾನದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಮತ್ತು ಸಿಬ್ಬಂದಿ ಹೊಸದಿಲ್ಲಿ ನೇತೃತ್ವದಲ್ಲಿ ಇಂದಿನಿಂದ (ಮಾ.1ರಿಂದ) 3ರ ತನಕ ನಡೆಯುವ 'ಪುಸ ಕೃಷಿ ವಿಜ್ಞಾನ ಮೇಳ'ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
'ಪುಸ ಕೃಷಿ ವಿಜ್ಞಾನ ಮೇಳ' ವನ್ನು ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ಮಾ.1ರಂದು ಬೆಳಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆಕೃಷಿ ಮತ್ತು ಕೃಷಿಕರ ಕಲ್ಯಾಣ ಅಭಿವೃದ್ಧಿ ರಾಜ್ಯ ಸಚಿವ ಪರ್ಷೋತ್ತಮ್ ರುಪಾಲ ಮತ್ತು ಕೈಲಾಶ್ ಚೌಧರಿ ಅಧ್ಯಕ್ಷತೆ ವಹಿಸುವರು. ಡಿ.ಎ.ಆರ್.ಇ. ಕಾರ್ಯದರ್ಶಿ, ಐಸಿಎಆರ್ ಪ್ರಧಾನ ವ್ಯವಸ್ಥಾಪಕ ಡಾ.ತ್ರಿಲೋಚನ್ ಮೋಹಪತ್ರ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಮಾ.3ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃಷಿ ಮತ್ತು ಕೃಷಿಕರ ಕಲ್ಯಾಣ ಅಭಿವೃದ್ಧಿ ರಾಜ್ಯ ಸಚಿವ ಕೈಲಾಶ್ ಚೌಧರಿ, ಡಾ.ತ್ರಿಲೋಚನ್ ಮೋಹಪತ್ರ, ಪೆÇ್ರ.ಎ.ಕೆ.ಮಿಶ್ರಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ನೀತಿ ಆಯೋಗ ಸದಸ್ಯ ರಮೇಶ್ ಚಂದ್ ಅಧ್ಯಕ್ಷತೆ ವಹಿಸುವರು.
ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಹಿಂದಿ ಶಿಕ್ಷಕ ಸರವು ಸುಬ್ರಹ್ಮಣ್ಯ ಭಟ್ ಮತ್ತು ತಿರುಮಲೇಶ್ವರಿ ದಂಪತಿ ಪುತ್ರ ಗೋಪಾಲಕೃಷ್ಣ ಶರ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾ ಸಂಸ್ಥೆಯಲ್ಲಿ ಪಡೆದಿದ್ದಾರೆ. ಬಿ.ಎಸ್.ಸಿ. ಬಾಟನಿ ಪದವೀಧರರಾಗಿದ್ದು ಕೃಷಿ, ಹೈನುಗಾರಿಕೆ, ಸಣ್ಣ ಪುಟ್ಟ ಕೃಷಿ ಯಂತ್ರೋಪಕರಣಗಳ ಆವಿಷ್ಕಾರ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಾಸರಗೋಡು ರಾಡ್ಕೋ ಸಂಸ್ಥೆ ಈಗಾಗಲೇ ಗೋಪಾಲಕೃಷ್ಣ ಶರ್ಮ ಅವರಿಂದ 150ಕ್ಕೂ ಹೆಚ್ಚು ಥ್ರೆಶರ್ ಯಂತ್ರ ಖರೀದಿಸಿದೆ.ಪೆರ್ಲ, ಪೆರಡಾಲ ಕೃಷಿ ಭವನ ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಯಂತ್ರವನ್ನು ಖರೀದಿಸಿ ಕೃಷಿಕರಿಗೆ ಬಾಡಿಗೆಗೆ ನೀಡುತ್ತಿದೆ.ಕಾಸರಗೋಡು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆ, ಗೋವಾ, ಕೋಲ್ಕತ್ತಾ ಮತ್ತಿತರ ಭಾಗದ ಕೃಷಿಕರೂ ಈ ಯಂತ್ರವನ್ನು ಖರೀದಿಸಿದ್ದಾರೆ.