ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‍ಐಸಿ) ಸರ್ಕಾರದ ಸ್ವಲ್ಪ ಪಾಲು ಮಾರಾಟಕ್ಕೆ ನಿರ್ಧಾರಿಸಿದ್ದು, ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಕುರಿತು ನಿರ್ಧರಿಸಿದೆ.
ಈ ಕುರಿತಂತೆ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದ್ದು, ಇಂದು ಸಂಸತ್ ನಲ್ಲಿ 2020ನೇ ಸಾಲಿನ ಬಜೆಟ್ ಮಂಡಿಸಿದ ಈ ಕುರಿತು ಮಾಹಿತಿ ನೀಡಿದರು. ಈ ಹಿಂದೆ ಭಾರತೀಯ ಜೀವ ವಿಮಾ ಸಂಸ್ಥೆ ಸಂಕಷ್ಟದಲ್ಲಿದೆ ಎಂದು ಹೇಳಿದ್ದ ನಿರ್ಮಲಾ ಸೀತಾರಾಮನ್ ಅವರು, ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‍ಐಸಿ) ಸರ್ಕಾರದ ಸ್ವಲ್ಪ ಪಾಲು ಮಾರಾಟಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಎಲ್ ಐ ಸಿ ಸಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಠೇವಣಿ ವಿಮೆ 1 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಳ
ಇದೇ ವೇಳೆ ಬ್ಯಾಂಕ್ ಗಳನ್ನು ದೃಢಪಡಿಸುತ್ತೇವೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್ ಅವರು, ಬ್ಯಾಂಕ್ ಗಳಲ್ಲಿನ ಠೇವಣಿದಾರರ ಹಣ ಸುರಕ್ಷಿತವಾಗಿದೆ. 3.50 ಲಕ್ಷ ಕೋಟಿ ರೂಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಪುನರ್ಧನ ಯೋಜನೆಯಡಿ ಬಂಡವಾಳ ಒದಗಿಸಿದ್ದೇವೆ. ಬ್ಯಾಂಕ್‍ಗಳಲ್ಲಿ ಇರುವ ಠೇವಣಿ ವಿಮೆಯನ್ನು 1 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಿಸುತ್ತಿದ್ದೇವೆ. ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಐಡಿಬಿಐ ಬ್ಯಾಂಕ್‍ಗೆ ಇನ್ನಷ್ಟು ಖಾಸಗಿ ಬಂಡವಾಳ ಹರಿದುಬರುವಂತೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕ ನಿವೃತ್ತಿ ವೇತನ ವ್ಯವಸ್ಥೆ ಜಾರಿ ಮಾಡುತ್ತೇವೆ. ಉದ್ಯೋಗಿಗಳು ತನ್ನಿಂತಾನೆ ಈ ಯೋಜನೆಗೆ ಸೇರ್ಪಡೆಯಾಗುತ್ತಾರೆ. ಜನರು ವೃದ್ಧಾಪ್ಯ ನಿಧಿಗೆ ಪ್ಲಾನ್ ಮಾಡಿಕೊಳ್ಳಲು ನೆರವಾಗುತ್ತೇವೆ ಎಂದು ಹೇಳಿದರು. ಅಂತೆಯೇ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬ್ಯಾಂಕ್‍ಗಳ ಮೂಲಕ ಅಗತ್ಯ ಬಂಡವಾಳ ಒದಗಿಸಲು ಕ್ರಮ. ಸಾಲ ಮರುಹೊಂದಾಣಿಕೆಯಿಂದ 5 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಅನುಕೂಲವಾಗಿದೆ. ಈ ಯೋಜನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ಸರ್ಕಾರ ಆರ್‍ಬಿಐಗೆ ಮನವಿ ಮಾಡಿದೆ. ಹಲವು ಮಧ್ಯಮ ಗಾತ್ರದ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿವೆ. ಇಂಥ ಫಾರ್ಮಾ, ಆಟೊ ಕ್ಷೇತ್ರದ ಉದ್ದಿಮೆಗಳು ವಿದೇಶಗಳಿಗೆ ವ್ಯವಹಾರ ವಿಸ್ತರಿಸಲು ಆಸಕ್ತಿ ತೋರಿದರೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಹೇಳಿದರು.
ಇದಲ್ಲದೆ ಬಾಂಡ್ (ಸಾಲಪತ್ರ) ವ್ಯವಹಾರ ವಿಸ್ತರಣೆಗೆ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರದ ಹಲವು ರೀತಿಯ ಸಾಲಪತ್ರಗಳಲ್ಲಿ ವಿದೇಶಿ ಹೂಡಿಕೆದಾರರಿಗೂ ಹೂಡಿಕೆಗೆ ಅವಕಾಶ ಕೊಡುತ್ತೇವೆ. ಸರ್ಕಾರದ ಸಾಲಪತ್ರಗಳಿಗಾಗಿ, ಬಂಡವಾಳ ಸಂಚಯಕ್ಕಾಗಿ ರೂಪಿಸಿದ ಭಾರತ್ ಬಾಂಡ್ ಎಟಿಎಫ್ ಉಲ್ಲೇಖ. 1.3 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಮೂಲ ಸೌಕರ್ಯ ಯೋಜನೆಗಳು ಬಾಕಿಯಿವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಈ ಪೈಕಿ 23 ಸಾವಿರ ಕೋಟಿ ಅಂದಾಜಿನ ಯೋಜನೆಯ ಪೂರ್ಣಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ವಿಶ್ವಮಟ್ಟದ ಚಿನ್ನದ ಮಾರುಕಟ್ಟೆ ಭಾರತದಲ್ಲಿ ಸ್ಥಾಪಿಸುತ್ತೇವೆ. ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿದರು.