ನವದೆಹಲಿ: ಭಾರತೀಯ ಸೇನೆ ಎರಡರಿಂದ ಐದರಷ್ಟು ಥಿಯೇಟರ್ ಕಮಾಂಡ್ ಗಳನ್ನು ಸ್ಥಾಪಿಸಲು ಯೋಜಿಸಿದ್ದು ಅವುಗಳಲ್ಲಿ ಮೊದಲನೆಯದ್ದು 2022ಕ್ಕೆ ಅಸ್ಥಿತ್ವಕ್ಕೆ ಬರಲಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಥಿಯೇಟರ್ ಕಮಾಂಡ್ ರಚಿಸಲಿದ್ದು ಅದರ ರಚನೆ ಹೇಗಿರುತ್ತದೆ ಎಂದು ಇನ್ನೂ ಅಂತಿಮಗೊಳಿಸಿಲ್ಲ ಎಂದರು. ಲಾಜಿಸ್ಟಿಕ್ಸ್ ಮತ್ತು ತರಬೇತಿಗೆ ಪ್ರತ್ಯೇಕ ಜಂಟಿ ಕಮಾಂಡ್ ಸ್ಥಾಪಿಸುವ ಯೋಜನೆ ಕೂಡ ಇದೆ ಎಂದರು.ವಾಯು ರಕ್ಷಣಾ ಕಮಾಂಡ್ ಮತ್ತು ಜಂಟಿ ವಾಯು ಕಮಾಂಡ್ ಮಾರ್ಗದರ್ಶನದಲ್ಲಿ ಭಾರತೀಯ ವಾಯುಪಡೆ ಉಪಾಧ್ಯಕ್ಷರ ನೇತೃತ್ವದಡಿ ಅಧ್ಯಯನ ನಡೆಸಲಾಗುತ್ತದೆ. ಅದು 2021ಕ್ಕೆ ತಯಾರಾಗಲಿದೆ ಎಂದರು. ವೈಮಾನಿಕ ದಾಳಿಯ ಸಂದರ್ಭದಲ್ಲಿ ಆದೇಶಗಳನ್ನು ಸಮಯೋಚಿತವಾಗಿ ಅನುಷ್ಠಾನಗೊಳಿಸಲು ವಾಯು ರಕ್ಷಣೆ ಕಮಾಂಡ್ ಸಹಾಯ ಮಾಡುತ್ತದೆ.
ಏನಿದು ಥಿಯೇಟರ್ ಕಮಾಂಡ್:
ಥಿಯೇಟರ್ ಕಮಾಂಡ್ ಒಂದು ಮಿಲಿಟರಿ ರಚನೆಯಾಗಿದ್ದು, ಇದರಲ್ಲಿ ಒಂದು ನಿರ್ದಿಷ್ಟ ಯುದ್ಧಭೂಮಿಯಲ್ಲಿ ಭಾರತದ ಮೂರೂ ಸೇನಾಪಡೆಗಳಾದ ಸೈನ್ಯ, ವಾಯುಪಡೆ ಮತ್ತು ನೌಕಾಪಡೆಯ ಎಲ್ಲಾ ಸ್ವತ್ತು, ಸಾಮಗ್ರಿ, ಉಪಕರಣಗಳನ್ನು 3 ಸ್ಟಾರ್ ಸ್ಟಿಕರ್ ಗಳನ್ನು ಹೊಂದಿರುವ ಜನರಲ್ ಕಾರ್ಯಾಚರಣೆಯ ನಿಯಂತ್ರಣದಲ್ಲಿರುತ್ತವೆ.