ಕಾಸರಗೋಡು: ಕಾಸರಗೋಡಿನಲ್ಲೂ ಇನ್ನು ಮುಂದೆ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿದ "ಹಸಿವು ರಹಿತ ರಾಜ್ಯ ಯೋಜನೆ"ಯ ಅಂಗವಾಗಿ ಈ ಕ್ರಮ ಅನುಷ್ಟಾನಗೊಳ್ಳಲಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2020-21ನೇ ವರ್ಷದ ಕುಟುಂಬಶ್ರೀ ಜಿಲ್ಲಾ ಕ್ರೀಯಾಯೋಜನೆ ಪ್ರಸ್ತುತಿ ಸಭೆಯಲ್ಲಿ ಈ ವಿಚಾರ ಪ್ರಕಟಿಸಲಾಗಿದೆ.
ಮಧ್ಯಾಹ್ನ ಭೋಜನ ಯೋಜನೆಗಾಗಿ 38 ಗ್ರಾಮಪಂಚಾಯತ್ ಗಳ, ಮೂರು ನಗರಸಭೆಗಳ 41 ಹೋಟೆಲ್ ಗಳನ್ನು ತೆರೆಯಲಾಗುವುದು ಎಂದು ಕ್ರಿಯಾ ಯೋಜನೆ ಮಂಡಿಸಿದ ಕುಟುಂಬಶ್ರೀಜಿಲ್ಲಾ ಸಮಿತಿ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು. ಕುಟುಂಬಶ್ರೀ ಚಟುವಟಿಕೆಗಳಿಗೆ ಅಗತ್ಯವಿರುವ ತರಬೇತಿ ನೀಡಿ ಮಾ.15ರ ಮುಂಚಿತವಾಗಿ ನೂತನ ಆಹಾರ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಮೂಲಕ ಸುಮಾರು 200 ಮಂದಿಗೆ ನೌಕರಿ ಲಭಿಸಲಿದೆ. ಯೋಜನೆಗಾಗಿ ಮೂಲಭೂತ ಸೌಲಭ್ಯಗಳನ್ನು ಸ್ಥಳೀಯಡಳಿತ ಸಂಸ್ಥೆಗಳು ಒದಗಿಸಲಿವೆ ಎಂದವರು ನುಡಿದರು.
10 ಸಾವಿರ ಉದ್ಯೋಗ ಸೃಷ್ಟಿ!
ಕುಟುಂಬಶ್ರೀ ನೇತೃತ್ವದಲ್ಲಿ ಜಿಲ್ಲೆಯಲ್ಲಿ 10 ಸಾವಿರ ನೌಕರಿಗಳನ್ನು ಸೃಷ್ಟಿಸುವ ಯೋಜನೆ ಜಾರಿಗೊಳ್ಳಲಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಒಂದು ಸಾವಿರ ಕೃಷಿಕ ಗುಂಪುಗಳನ್ನು ರಚಿಸಲಾಗುವುದು. ತರಕಾರಿ, ಹಣ್ಣುಗಳು ಉತ್ಪಾದನೆಗೆ ಆದ್ಯತೆ ನೀಡಿ,ಉತ್ಪಾದನೆ ಸಾಮಥ್ರ್ಯ ಹೆಚ್ಚಿಸಲಾಗುವುದು ಎಂದವರು ತಿಳಿಸಿದರು.
ಲೈಫ್ ಮಿಷನ್ ಫಲಾನುಭವಿಗಳಿಗೆ ಆದ್ಯತೆ:
ಕುಟುಂಬಶ್ರೀಯ ಉತ್ಪನ್ನಗಳನ್ನು ಮನೆಮನೆಗೆ ತಲಪಿಸುವ "ಮನೆಯಲ್ಲೊಂದು ಕುಟುಂಬಶ್ರೀ ಉತ್ಪನ್ನ" ಎಂಬ ಯೋಜನೆ ಅನುಷ್ಟಾನಗೊಳಿಸಲಾಗುವುದು. ಈ ಯೋಜನೆಗಾಗಿ ಒಂದು ಸಾವಿರ ಸೇಲ್ಸ್ ಎಕ್ಸಿಕ್ಯೂಟಿವ್ ಗಳನ್ನು ನೇಮಿಸಲಾಗುವುದು. ಲೈಫ್ ಮಿಷನ್ ಫಲಾನುಭವಿಗಳು, ವಿಧವೆಯರು, ವಿಶೇಷಚೇತನರು, ಸ್ನೇಹಿತೆ ಕಾಲಿಂಗ್ ಬೆಲ್ ವ್ಯಾಪ್ತಿಯ ಮಂದಿ ಮೊದಲಾದವರಿಗೆ ಆದ್ಯತೆ ನೀಡಿ ಈ ನೇಮಕಾತಿ ನಡೆಯಲಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಭೆಯನ್ನು ಉದ್ಘಾಟಿಸಿದರು.ಕುಟುಂಬಶ್ರೀ ಸಹಾಯಕ ಜಿಲ್ಲಾ ಸಮಿತಿ ಸಂಚಾಲಕರಾದ ಸಿ.ಹರಿದಾಸನ್, ಪ್ರಕಾಶನ್ ಪಾಲಾಳಿ, ಜೋಸೆಫ್ ಪೆರುಂಗಿಲ್, ಡಿ.ಡಿ.ಯು.ಜಿ.ಕೆ.ವೈ. ಜಿಲ್ಲಾಯೋಜನೆ ಪ್ರಬಂಧಕ ರೇಷ್ಮಾ, ಸಿ.ಡಿ.ಎಸ್. ಅಧ್ಯಕ್ಷೆಯರು, ಉಪಾಧ್ಯಕ್ಷೆಯರು, ಅಕೌಂಟೆಂಟ್ ಗಳು, ಉಪಸಮಿತಿ ಸಂಚಾಲಕರು ಮೊದಲಾದವರು ಉಪಸ್ಥಿತರಿದ್ದರು.