ಕುಂಬಳೆ: ಕುಂಬಳೆ ಸೀಮೆಯ ಇಚ್ಲಂಪಾಡಿ ದರ್ಬಾರ್‍ಕಟ್ಟೆ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಫೆ.28ರಿಂದ ಮಾ.7ರ ತನಕ ನಡೆಯಲಿದೆ.
ಕುಂಬಳೆ ಸೀಮೆಯ ಸರೋವರ ಕ್ಷೇತ್ರಗಳಲ್ಲಿ ಒಂದಾದ ಮುಂಡಪಳ್ಳದಲ್ಲಿ ಇಚ್ಚಿಲತ್ತಾಯ ಎಂಬ ಪ್ರಸಿದ್ಧ ತುಳು ಬ್ರಾಹ್ಮಣ ಕುಟುಂಬ ದೇವಸ್ಥಾನ ನಿರ್ಮಿಸಿ ಆರಾಧಿಸಿಕೊಂಡು ಬರುತ್ತಿದ್ದರು. ಆದರೆ ರಾಜರ ಆಳ್ವಿಕೆ ಕೊನೆಗೊಂಡ ಬಳಿಕ ಕಾರಣಾಂತರಗಳಿಂದ ಶ್ರೀ ರಾಜರಾಜೇಶ್ವರಿ ಕ್ಷೇತ್ರವು ಜೀರ್ಣಾವಸ್ಥೆಗೆ ತಲುಪಿದಲ್ಲದೇ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಹೀಗಿರುವಾಗ ಕ್ಷೇತ್ರದ ನಿರ್ಮಾಣದ ಮಹಾತ್ಕಾರ್ಯದ ಕುರಿತು ಚಿಂತನೆ ನಡೆಯುತ್ತಿರುವಾಗಲೇ ಯುವ ಉದ್ಯಮಿ ಕೆ.ಕೆ.ಶೆಟ್ಟಿ ಕ್ಷೇತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿ, ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಶಿಲ್ಪಿಗಳಾದ ಉಣ್ಣಿಕೃಷ್ಣನ್ ಮತ್ತು ದಾರುಶಿಲ್ಪಚತುರ ವಿಷ್ಣು ಆಚಾರ್ಯರ ನಿರ್ದೇಶದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ ನಿರ್ಮಾಣಗೊಂಡಿತ್ತು. ಇದರ ಪೂರ್ಣ ಜವಾಬ್ದಾರಿಯನ್ನು ಮಂಜುನಾಥ ಆಳ್ವರು ವಹಿಸಿದ್ದರು. ಸುಮಾರು ನಾಲ್ಕು ಕೋಟಿ ರೂ. ತನಕ ವೆಚ್ಚ ಮಾಡಲಾಗಿದೆ.
ಇದೀಗ ಕ್ಷೇತ್ರದ ಮಾಡಿಗೆ ತಾಮ್ರ ಹೊದಿಸಿದ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ, ವಿಶಾಲವಾದ ಸುಸಜ್ಜಿತ ಸುತ್ತುಗೋಪುರಗಳು, ತೀರ್ಥದ ಬಾವಿ, ಹಾಸುಗಲ್ಲಿನಿಂದ ಶೋಭಿಸುವ ಅಂಗಣ, ಶೌಚಾಲಯ ಸಹಿತ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಚಾಮುಂಡಿ ಹಾಗೂ ಗುಳಿಗ ದೈವಗಳ ಕಟ್ಟೆಯು ನಿರ್ಮಾಣಗೊಂಡಿದೆ. ಬ್ರಹ್ಮಕಲಶಾಭಿಷೇಕದ ಯಶಸ್ವಿಗಾಗಿ ಊರವರೆಲ್ಲರನ್ನೂ ಸೇರಿಸಿಕೊಂಡು 500 ಮಂದಿಯ ಸಮಿತಿ ರಚಿಸಲಾಗಿದೆ.
ಫೆ.29ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಆಶೀರ್ವಚನ ನೀಡುವರು. ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್, ಶಾಸಕ ಎನ್.ಎ.ನೆಲ್ಲಿಕುನ್ನು, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಸುಗಣಾ ಬಿ.ತಂತ್ರಿ ದೇಲಂಪಾಡಿ, ಪುಂಡರೀಕಾಕ್ಷ ಕೆಎಲ್, ಕೋಳಾರು ಕುಂಞಣ್ಣ ಭಂಡಾರಿ, ಸತ್ಯಶಂಕರ ಭಟ್, ಗೀತಾ ಲೋಕನಾಥ ಶೆಟ್ಟಿ, ರಘುರಾಮ ರೈ, ಸೋಮಶೇಖರ ಜೆ.ಎಸ್., ಸದಾನಂದ ಕಾಮತ್, ಎಂ.ಸುಕುಮಾರ, ಶಂಕರನಾರಾಯಣ ಭಟ್, ಬಾಬು ಪಚ್ಚಿಲಂಪಾರೆ ಮತ್ತಿತರರು ಉಪಸ್ಥಿತರಿರುವರು.
ಬ್ರಹ್ಮಕಲಶಾಭಿಷೇಕದಂಗವಾಗಿ ವಿವಿಧ ದಿನಗಳಲ್ಲಿ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭಾ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ.4ರಂದು ಬೆಳಗ್ಗೆ 7.45ರ ಮೃಗಶಿರಾ ನಕ್ಷತ್ರ ಮೀನ ಲಗ್ನ ಶುಭಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯುವುದು. ಫೆ.7ರಂದು ಬೆಳಗ್ಗೆ 7.30ರಿಂದ 9.20ರ ಮಧ್ಯೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯುವುದು. ಪ್ರತೀ ದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯುವುದು.