ಪೆರ್ಲ : ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹದಿನೈದನೇ ವಾರ್ಷಿಕೋತ್ಸವ ಹಾಗೂ ಪಡ್ರೆ ಚಂದು ಜನ್ಮಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಫೆಬ್ರವರಿ 29 ರಂದು ಶನಿವಾರ ಸಂಜೆ 4ಕ್ಕೆ ಪಡ್ರೆ ಚಂದು ಸಂಸ್ಮರಣೆ ಹಾಗೂ ವಿಚಾರ ಸಂಕಿರಣ ಜರಗಲಿದೆ.
ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಎಸ್.ಬಿ. ನರೇಂದ್ರ ಕುಮಾರ್ ಧರ್ಮಸ್ಥಳ ಅಧ್ಯಕ್ಷತೆ ವಹಿಸಲಿದ್ದು ಯಕ್ಷಗಾನ ಹಿರಿಯ ಕಲಾವಿದರು ಅರ್ಥಧಾರಿಗಳು ಆದ ಅಶೋಕ ಭಟ್ ಉಜಿರೆ ಉದ್ಘಾಟಿಸುವರು. ವಿಚಾರಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದರಾಗಿ ಪಡ್ರೆ ಚಂದು ವಿಷಯದ ಬಗ್ಗೆ ಯಕ್ಷಗಾನ ಹಿರಿಯ ಕಲಾವಿ ಅರ್ಥಧಾರಿಗಳು ಆದ ಕೋಟೆ ರಾಮ ಭಟ್, ಯಕ್ಷಗಾನ ಗುರುಗಳಾಗಿ ಪಡ್ರೆ ಚಂದು ವಿಷಯದ ಬಗ್ಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಉಮೇಶ ಶೆಟ್ಟಿ ಉಬರಡ್ಕ, ಮೇಳದ ಪ್ರಬಂದಕರಾಗಿ ಪಡ್ರೆ ಚಂದು ವಿಷಯದ ಬಗ್ಗೆ ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ವಿಚಾರ ಮಂಡಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಧಾಕೃಷ್ಣ ಕಲ್ಚಾರ್, ಯೋಗೀಶ ರಾವ್ ಚಿಗುರುಪಾದೆ, ಕದ್ರಿ ನವನೀತ ಶೆಟ್ಟಿ, ಆರತಿ ಪಟ್ರಮೆ ಹಾಗೂ ಸ್ವರ್ಗ ಶಾಲಾ ನಿವೃತ್ತ ಮುಖ್ಯಶಿಕ್ಷಕ ವಾಸುದೇವ ಭಟ್ ಉಪಸ್ಥಿತರಿರುವರು. ಯಕ್ಷಗಾನ ಕಲಾವಿದ, ಉಪನ್ಯಾಸಕ ಎನ್.ಕೆ.ರಾಮಚಂದ್ರ ಭಟ್ ಪನೆಯಾಲ ಸಮಾರಂಭವನ್ನು ನಿರೂಪಿಸುವರು. ಬಳಿಕ ನಡೆಯುವ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಸಭಾಧ್ಯಕ್ಷತೆ ವಹಿಸುವರು.