ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಅಗೆಯುವುದು v/s ಅಗಿಯುವುದು
೯ಫೆಬ್ರವರಿ೨೦೨೦ರ ವಿಶ್ವವಾಣಿ ಪತ್ರಿಕೆಯ 'ಇದೇ ಅಂತರಂಗ ಸುದ್ದಿ' ಅಂಕಣದಲ್ಲಿ ವಿಶ್ವೇಶ್ವರ ಭಟ್ಟರು ಚುಯಿಂಗ್ ಗಮ್ ಕುರಿತು ವಿವರಿಸುತ್ತ “೧೮೯೧ರಲ್ಲಿ ಮೊದಲ ಬಾರಿಗೆ ವ್ರಿಗ್ಲೇಯ್ ಕಂಪನಿ ಚುಯಿಂಗ್ ಗಮ್ ಅಗೆಯುವುದನ್ನು ಜಗತ್ತಿಗೆ ಹೊಸ ಅಭ್ಯಾಸವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು." ಎಂದು ಬರೆದಿದ್ದಾರೆ. “ಇದರಲ್ಲಿ ಅವರು ಬಳಸಿದ ಪದ ‘ಅಗೆಯುವುದು’- ಇದು ‘ಅಗಿಯುವುದು’ ಆಗಬೇಕಿತ್ತಲ್ಲವೇ? ನನಗೆ ಗೊತ್ತಿರುವಂತೆ 'ಅಗೆ' ಎಂದರೆ ನೆಲವನ್ನು ತೋಡುವುದು ಅಥವಾ ಬಗೆಯುವುದು ಎಂದರ್ಥ. 'ಅಗಿ' ಎಂದರೆ ಜಗಿದು ತಿನ್ನುವುದು." ಎಂದು ಕೇಳಿದ್ದಾರೆ ಮೈಸೂರಿನಿಂದ ವಿ.ನಾಗೇಂದ್ರ.
ಉತ್ತರ: ಹೌದು, ಅಗೆ ಮತ್ತು ಅಗಿ ಕ್ರಿಯಾಪದಗಳನ್ನು ಪ್ರತ್ಯೇಕ ಅರ್ಥ/ಸಂದರ್ಭಗಳಲ್ಲಿ ಬಳಸುತ್ತೇವೆ. ಬಾಯಿಯಲ್ಲಿ bite, chew, ಅಥವಾ chomp ಮಾಡುವುದೆಂಬ ಇಂಗ್ಲಿಷ್ ಕ್ರಿಯಾಪದಕ್ಕೆ ಸಮಾನವಾದುದು ಕನ್ನಡದ ‘ಅಗಿ’ ಮತ್ತು ‘ಜಗಿ’. ಹಲ್ಲುಗಳಿಂದ ಅರೆಯುವ ಕ್ರಿಯೆ ಅದು. ನಾವು ಚುಯಿಂಗ್ ಗಮ್‌ಅನ್ನು ‘ಅಗಿ’ಯುತ್ತೇವೆಯೇ ವಿನಾ ‘ಅಗೆ’ಯುವುದಿಲ್ಲ. ಭಟ್ಟರ ಕೈಬರಹದಲ್ಲಿ ‘ಗಿ’ ಮತ್ತು ‘ಗೆ’ ಅಕ್ಷರಗಳು ಒಂದೇರೀತಿ ಕಂಡುಬಂದು ಕೀ-ಇನ್ ಮಾಡುವವರು ‘ಅಗಿ’ಯನ್ನು ‘ಅಗೆ’ ಮಾಡಿದ್ದಿರಲೂಬಹುದು. ಅದೇ ಬರಹದಲ್ಲಿ ಮುಂದೆ “ಅದಾಗಿ ಸುಮಾರು ಐವತ್ತು ವರ್ಷಗಳ ನಂತರ, ವ್ರಿಗ್ಲೇಯ್ ಕಂಪನಿ ಚುಯಿಂಗ್ ಗಮ್ ಸೇವಿಸಿದರೆ ಬಾಯಿ ಫ್ರೆಶ್ ಆಗುತ್ತದೆ ಎಂಬ ಜಾಹೀರಾತಿನ ಮೂಲಕ ಪ್ರಚಾರ ಆರಂಭಿಸಿತು. ಅದು ಚುಯಿಂಗ್ ಗಮ್ ಅಗೆಯುವ ಉದ್ದೇಶಕ್ಕೆ ಹೊಸ ಅರ್ಥ ನೀಡಿತು. Refresh your taste ಎಂಬ ಜಾಹೀರಾತು ಚುಯಿಂಗ್ ಗಮ್ ಅಗೆಯುವುದರ ಮೂಲಕ ಬಾಯಿಯನ್ನು ಫ್ರೆಶ್ ಮತ್ತು ಶುದ್ಧವಾಗಿ ಇಟ್ಟುಕೊಳ್ಳಬಹುದು ಎಂಬ ಸಂದೇಶವನ್ನು ನೀಡಿತು." ಎಂದು ಮತ್ತೆರಡು ಬಾರಿ ‘ಅಗೆ’ದಿದ್ದಾರೆ.
ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ, ಅಮೆರಿಕದ ಶಿಕಾಗೊ ನಗರದಲ್ಲಿ ೧೮೯೧ರಲ್ಲಿ ಸ್ಥಾಪನೆಯಾದ Wrigley Companyಯ ಹೆಸರು ಇಂಗ್ಲಿಷ್‌ನಲ್ಲಿ WRIGLEY ಎಂಬ ಸ್ಪೆಲ್ಲಿಂಗ್ ಆದರೂ ಉಚ್ಚರಿಸುವುದು ‘ರಿಗ್ಲೇ’ ಎಂದು. ಆದ್ದರಿಂದ ಕನ್ನಡದಲ್ಲಿ ಬರೆಯುವಾಗ ‘ವ್ರಿಗ್ಲೇಯ್’ ಎಂದು ಬರೆಯುವುದಕ್ಕಿಂತ ‘ರಿಗ್ಲೇ’ ಎಂದು ಬರೆಯುವುದು ಒಳ್ಳೆಯದು. ಹಾಗೆಯೇ, ‘ನಂತರ’ವನ್ನು ‘ಅನಂತರ’ ಎಂದು ಬರೆದರೆ ಮತ್ತೂ ಒಳ್ಳೆಯದು.
ಪ್ರಶ್ನೆ: ವರಕವಿ ಬೇಂದ್ರೆಯವರಿಗೆ ಚುಯಿಂಗ್ ಗಮ್ ಕೊಟ್ಟರೆ ಅವರು ಏನು ಮಾಡಬಹುದು?
ತರ್ಲೆ ಉತ್ತರ: “ಚುಯಿಂಗ್ ಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ..." ಎಂದು ಹಾಡಬಹುದು!
===
೨. ಅಕ್ರಮ ಸಕ್ರಮ
“ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮೈಸೂರು ಜಿಪಂ ಅಧ್ಯಕ್ಷರ ಕಾರಿನ ಚಾಲಕನನ್ನು ಎಳನೀರು ವ್ಯಾಪಾರಿಯೊಬ್ಬ ಶನಿವಾರ ರಾತ್ರಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ" - ಇದು ವಿಜಯವಾಣಿ ಪತ್ರಿಕೆಯ ಮೈಸೂರು ಆವೃತ್ತಿಯಲ್ಲಿ ೧೦ಫೆಬ್ರವರಿ೨೦೨೦ರ ಸಂಚಿಕೆಯಲ್ಲಿ ಬಂದ ಸುದ್ದಿಯೊಂದರ ಮೊದಲ ವಾಕ್ಯ. [ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ಅನಂತ ತಾಮ್ಹನಕರ್]
ಈ ವಾಕ್ಯವನ್ನು ನೀವು ಈಗ ಒಂದೊಂದೇ ಪದದಂತೆ ಎಡದಿಂದ ಬಲಕ್ಕೆ ಓದತೊಡಗಬೇಕು. "ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮೈಸೂರು ಜಿಪಂ ಅಧ್ಯಕ್ಷ" ಎಂಬಲ್ಲಿಯವರೆಗೆ ಓದಿ. ಜಿಪಂ ಅಧ್ಯಕ್ಷರಿಗೆ ತನ್ನದೇ ಪತ್ನಿಯ ಜತೆ ಅಕ್ರಮ ಸಂಬಂಧ? ಅಕಟಕಟಾ!! ಅಥವಾ, ಇನ್ನೂ ಸ್ವಲ್ಪ ಮುಂದುವರಿಸಿದರೆ, ಅವರ ಪತ್ನಿಯ ಜತೆ ಅಕ್ರಮ ಸಂಬಂಧ ಇದ್ದದ್ದು ಅವರ ಕಾರಿಗೆ ಎಂದು ಕೂಡ ಶಂಕಿಸಬಹುದು. ಮತ್ತಷ್ಟು ಮುಂದುವರಿದರೆ ಗೊತ್ತಾಗುವುದು ಅಕ್ರಮ ಸಂಬಂಧ ಇದ್ದದ್ದು ಜಿಪಂ ಅಧ್ಯಕ್ಷರ ಕಾರಿನ ಚಾಲಕನಿಗೆ. ಆದರೆ ಅಕ್ರಮ ಸಂಬಂಧ ಜಿಪಂ ಅಧ್ಯಕ್ಷರ ಪತ್ನಿಯ ಜತೆ ಅಲ್ಲ, ಎಳನೀರು ಮಾರುವ ವ್ಯಾಪಾರಿಯ ಪತ್ನಿಯೊಂದಿಗೆ!
ಇದು, ಒಂದೇ ವಾಕ್ಯದಲ್ಲಿ ಪದೇ ಪದೇ ಷಷ್ಠೀ ವಿಭಕ್ತಿಪ್ರತ್ಯಯವನ್ನು ಬಳಸಿದ್ದರಿಂದ ಆಗಿರುವ ಗೊಂದಲ. “ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಎಳನೀರು ವ್ಯಾಪಾರಿಯೊಬ್ಬ ಶನಿವಾರ ರಾತ್ರಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಮೃತ ವ್ಯಕ್ತಿ ಮೈಸೂರು ಜಿಪಂ ಅಧ್ಯಕ್ಷರ ಕಾರಿನ ಚಾಲಕ." ಎಂದು ಎರಡು ವಾಕ್ಯಗಳಾಗಿ ಬರೆದಿರುತ್ತಿದ್ದರೆ ಸ್ವಲ್ಪವೂ ಗೊಂದಲ ಇರುತ್ತಿರಲಿಲ್ಲ. 100% ಸ್ಪಷ್ಟವಾಗಿ, ನಿಖರವಾಗಿ ಸುದ್ದಿಯನ್ನು ತಿಳಿಸಿದಂತಾಗುತ್ತಿತ್ತು. ಪತ್ರಿಕೆಗಳಲ್ಲಿ ಸುದ್ದಿಯನ್ನು ಬರೆಯುವಾಗ ವ್ಯಾಕರಣಬದ್ಧವಾಗಿ ಇರಬೇಕು ಎನ್ನುವುದಕ್ಕಿಂತಲೂ, 100% ನಿಖರವಾಗಿ ಒಂದೇ ನಿರ್ದಿಷ್ಟ ಅರ್ಥ ಬರುವಂತೆ ಇರುವುದು ಮುಖ್ಯ ಎಂಬುದನ್ನು ಪತ್ರಕರ್ತರು ಮನಗಾಣಬೇಕು.
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಕಶೇರುಕ ಸರಿ. ಬೆನ್ನುಮೂಳೆ, ಅಥವಾ ಬೆನ್ನುಮೂಳೆ ಇರುವ ಪ್ರಾಣಿ ಎಂಬ ಅರ್ಥದಲ್ಲಿ ಬಳಕೆ. ಕಷೇರುಕ ಎಂದು ಬರೆಯಬಾರದು.
ಆ) ಭೂಷಣ ಸರಿ. ಅಲಂಕಾರ, ಒಡವೆ, ಆಭರಣ, ಅಲಂಕರಿಸುವಿಕೆ ಎಂಬ ಅರ್ಥಗಳು. ಭೂಶಣ ಎಂದು ಬರೆಯಬಾರದು. ಬೂಷಣ ಸಹ ತಪ್ಪು. ೩ಫೆಬ್ರವರಿ೨೦೨೦ರ ಹೊಸದಿಗಂತ ಪತ್ರಿಕೆಯಲ್ಲಿ “ಪಟ್ಲ ಸತೀಶ್‌ಗೆ ಸೃಷ್ಟಿ ಕಲಾಬೂಷಣ ಪ್ರಶಸ್ತಿ" ಎಂಬ ಸುದ್ದಿಶೀರ್ಷಿಕೆ ಪ್ರಕಟವಾಗಿತ್ತು [ಗಮನಿಸಿ ಕಳುಹಿಸಿದವರು: ಪುತ್ತೂರಿನಿಂದ ಉಮಾಶಂಕರಿ ಎ.ಪಿ.] ಶೀರ್ಷಿಕೆಯಲ್ಲಿ ಮಾತ್ರವಲ್ಲದೆ ಸುದ್ದಿವಿವರದಲ್ಲೂ ‘ಕಲಾಬೂಷಣ’ ಎಂದೇ ತಪ್ಪಾಗಿ ಬರೆದದ್ದಿತ್ತು.
ಇ) ದೀರ್ಘಾವಧಿ ಸರಿ. ದೀರ್ಘ + ಅವಧಿ = ದೀರ್ಘಾವಧಿ. ಸವರ್ಣದೀರ್ಘ ಸಂಧಿ. ೧೧ಫೆಬ್ರವರಿ೨೦೨೦ರ ವಿಶ್ವವಾಣಿ ಸಂಚಿಕೆಯಲ್ಲಿ “ದೀರ್ಘವಾಧಿ ವಿಶ್ರಾಂತಿಯ ಬಳಿಕ ಟೆನಿಸ್ ಸ್ಪರ್ಧೆಗೆ ಮರಳಿರುವ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ತಮ್ಮ ತೂಕವನ್ನು ಕಡಿಮೆ ಮಾಡಿರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ." ಅಂತ ಇತ್ತು. [ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ನವೀನ್ ಸಾಗರ್]. ದೀರ್ಘಾವಧಿ ಎಂಬ ಪದವನ್ನು ‘ದೀರ್ಘವಾಧಿ’ ಎಂದು ಬರೆಯುವುದು ಯಾವ ವ್ಯಾಧಿ?
ಈ) ಹೇರಂಬ ಸರಿ. ಗಣಪತಿಯ ಒಂದು ಹೆಸರು. ಬಹಳಷ್ಟು ಜನರು ‘ಹೇರಂಭ’ ಎಂದು ತಪ್ಪಾಗಿ ಬರೆಯುತ್ತಾರೆ. ಹೇರಂಬನಿಗೆ ಸೊಂಡಿಲು ಇದೆ, ಬಾಲವಿಲ್ಲ ಎಂದು ನೆನಪಿಟ್ಟುಕೊಳ್ಳಬೇಕು.
ಉ) ಅಬಾಧಿತ ಸರಿ. ಬಾಧೆಗೊಳಗಾಗದ, ತೊಂದರೆಗೊಳಗಾಗದ ಎಂದು ಅರ್ಥ. ೩೧ಜನವರಿ೨೦೨೦ರ ವಿಜಯವಾಣಿ ಸಂಚಿಕೆಯಲ್ಲಿ “ಇಂದಿನಿಂದ 2 ದಿನ ಬ್ಯಾಂಕ್ ಬಂದ್. ಬೇಡಿಕೆಗಾಗಿ ನೌಕರರ ಮುಷ್ಕರ. ಎಟಿಎಂ ಸೇವೆ ಅಭಾದಿತ" ಎಂದು ಪ್ರಕಟವಾಗಿತ್ತು. [ಗಮನಿಸಿ ಕಳುಹಿಸಿದವರು: ಮಂಗಳೂರಿನಿಂದ ದೇವಿಕಿರಣ್ ಶೆಟ್ಟಿ]. ಹೀಗೆ ಬಾಲದ ಸ್ಥಾನಪಲ್ಲಟ ಮಾಡಿದರೆ ಮಂಗನ ಬಾಲ ಮಾನವನಿಗೆ ಬರಬಹುದು!
ಬರಹ:ಶ್ರೀವತ್ಸ ಜೋಶಿ. ವಾಶಿಂಗ್ಟನ್ ಡಿ.ಸಿ.