ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಸೂರ್ಯಂಗೇ ಟಾರ್ಚ್, ಸರಸ್ವತಿಗೇ ಟ್ಯೂಷನ್, ಪಿಎಚ್‌ಡಿ ಗೈಡಿಗೇ ಡಾಕ್ಟರೇಟ್!
ಇದು ಹೊಸದಿಗಂತ ಪತ್ರಿಕೆಯ ೧೪ಫೆಬ್ರವರಿ೨೦೨೦ರ ಸಂಚಿಕೆಯಲ್ಲಿ ಪ್ರಕಟವಾದ ಸುದ್ದಿ. ಆಫ್‌ಕೋರ್ಸ್, ಅಲ್ಲಿ ತಲೆಬರಹ ಹೀಗಿರಲಿಲ್ಲ. “ಡಾ.ಸುಂದರರಾಜ್ ಅರಸುಗೆ ಪಿಎಚ್‌ಡಿ ಪದವಿ" ಅಂತ ಇತ್ತು. [ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಮೋಹಿನಿ ದಾಮ್ಲೆ]. ಸುದ್ದಿಯ ವಿವರವು “ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಕಾಲೇಜಿನ ವೃತ್ತ ಪ್ರಾಧ್ಯಾಪಕ ಡಾ.ಸುಂದರರಾಜ್ ಅರಸು ಅವರು ಮಾರ್ಗ ದರ್ಶನದಲ್ಲಿ ಅತಿಥಿ ಉಪನ್ಯಾಸಕ ರವೀಂದ್ರ.ಬಿ.ಸಿ ಅವರು ಮಂಡಿಸಿದ ಎಫೆಕ್ಟ್ಸ್ ಆಫ್ 12 ವೀಕ್ಸ್ ಕಂಬೈನ್ಡ್ ಟ್ರೈನಿಂಗ್ ಆನ್ ಬಾಡ್ಮಿಂಟನ್ ಪ್ಲೇಯರ್ಸ್ ಆಫ್ ಡಿಫರೆಂಟ್ ಏಜ್ ಗ್ರೂಪ್ ಎಂಬ ವಿಷಯದ ಕುರಿತಾದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ" ಎಂದು ತಡೆರಹಿತ ಒಂದೇಒಂದು ವಾಕ್ಯದಲ್ಲಿ ಇತ್ತು. ಇದರಲ್ಲಿ
ಅ) “ವೃತ್ತ ಪ್ರಾಧ್ಯಾಪಕ" ಅಂತಿರುವಲ್ಲಿ “ನಿವೃತ್ತ ಪ್ರಾಧ್ಯಾಪಕ" ಎಂದಾಗಬೇಕಿತ್ತು. (ವೃತ್ತ ಪ್ರಾಧ್ಯಾಪಕ ಅಂದರೆ ಉರುಟುರುಟಾಗಿ ಇರುವವರು?)
ಆ) “ಡಾ.ಸುಂದರರಾಜ್ ಅರಸು ಅವರು ಮಾರ್ಗ ದರ್ಶನದಲ್ಲಿ" ಅಂತಿರುವಲ್ಲಿ "ಡಾ.ಸುಂದರರಾಜ್ ಅರಸು ಅವರ ಮಾರ್ಗದರ್ಶನದಲ್ಲಿ" ಎಂದಾಗಬೇಕಿತ್ತು. (ಅವರು ಅಲ್ಲ ಅವರ; ಮಾರ್ಗದರ್ಶನ ಒಂದೇ ಪದ)
ಇ) “ವಿಷಯದ ಕುರಿತಾದ ಸಂಶೋಧನಾ ಪ್ರಬಂಧಕ್ಕೆ..." ಅಂತಿರುವಲ್ಲಿ "ವಿಷಯವನ್ನು ಕುರಿತಾದ ಸಂಶೋಧನಾ ಪ್ರಬಂಧಕ್ಕೆ..." ಎಂದಾಗಬೇಕಿತ್ತು. (‘ಕುರಿತು’ ಪದದ ಹಿಂದಿನ ಪದಕ್ಕೆ ಷಷ್ಠೀ ವಿಭಕ್ತಿ ಪ್ರತ್ಯಯ ಬಳಸಬಾರದು, ದ್ವಿತೀಯಾ ವಿಭಕ್ತಿ ಪ್ರತ್ಯಯ ಬಳಸಬೇಕು).
ಪಿಎಚ್‌ಡಿ ಪ್ರಕ್ರಿಯೆಯಲ್ಲಿ ಗೈಡುಗಳ ಪಾತ್ರ ಗೊತ್ತಿದ್ದದ್ದೇ. ದಶಕಗಳ ಹಿಂದೆ ದೂರದರ್ಶನದಲ್ಲಿ ಜಸ್ಪಾಲ್ ಭಟ್ಟಿ ಪ್ರಸ್ತುತಪಡಿಸುತ್ತಿದ್ದ ಫ್ಲಾಪ್ ಷೋ ಹಾಸ್ಯಧಾರಾವಾಹಿಯಲ್ಲಿ ಪಿಎಚ್‌ಡಿ ಗೈಡುಗಳ ಬಗ್ಗೆಯೂ ಒಂದು ಎಪಿಸೋಡ್ ಇತ್ತು. “ಜೋ ತುಮ್‌ಕೋ ಹೋ ಪಸಂದ್ ವೊ ಹೀ ಬಾತ್ ಕಹೇಂಗೇ... ಬೀಕರ್ ಕೋ ಅಗರ್ ಜಾರ್ ಕಹೋ ಜಾರ್ ಕಹೇಂಗೇ..." ಎಂದು ಒಂದು ಜನಪ್ರಿಯ ಹಿಂದೀ ಚಿತ್ರಗೀತೆಯ ಸಾಹಿತ್ಯವನ್ನು ಬಳಸಿ ಪಿಎಚ್‌ಡಿ ಗೈಡು ಮತ್ತು ಗೈಡನ್ನು ಎಬೈಡು ಮಾಡುವವರ ರಸಾಯನಶಾಸ್ತ್ರ ಗುರು-ಶಿಷ್ಯ ಸಂಬಂಧವನ್ನು ಲೇವಡಿ ಮಾಡಲಾಗಿತ್ತು.
ಆದರೆ, ಪಿಎಚ್‌ಡಿ ಗೈಡಿಗೇ ಡಾಕ್ಟರೇಟ್ ಪ್ರದಾನ ಮಾಡಿರುವುದು ಬಹುಶಃ ಹೊಸದಿಗಂತ ಪತ್ರಿಕೆಯು ಬರೆದ ಅನನ್ಯ ದಾಖಲೆಯಾಗಿ ಉಳಿಯಲಿದೆ!
===
೨. ಭಾಷಾಂತರ ಬ್ರಹ್ಮರಾಕ್ಷಸನ ಹಾವಳಿ
ಹಿಂದೆಲ್ಲ ‘ಮುದ್ರಾರಾಕ್ಷಸನ ಹಾವಳಿ’ ಎನ್ನುವುದು ವಾಡಿಕೆಯಾಗಿತ್ತು. ಈಗ ಗೂಗಲ್ ಟ್ರಾನ್ಸ್‌ಲೇಷನ್‌ನಿಂದಾಗುವ ಅವಾಂತರಗಳನ್ನು ‘ಭಾಷಾಂತರ ಬ್ರಹ್ಮರಾಕ್ಷಸನ ಹಾವಳಿ" ಎನ್ನುವುದೊಳ್ಳೆಯದು. ಬೆಂಗಳೂರು ಮೆಟ್ರೋ ರೈಲುನಿಲ್ದಾಣದ ಎಲೆಕ್ಟ್ರಾನಿಕ್ ಫಲಕದಲ್ಲಿ ‘TRAIN COACHES" ಎಂದು ಬೋಗಿಗಳ ಸಂಖ್ಯೆ ತಿಳಿಸುವಾಗ “ರೈಲು ತರಬೇತುದಾರರು" ಎಂದು ಭಾಷಾಂತರವಾಗಿದ್ದದ್ದು ಸುದ್ದಿಯಾಗಿತ್ತು. ಬೆಂಗಳೂರು ಸಿಟಿ ರೈಲುನಿಲ್ದಾಣದಲ್ಲಿ ನಿಷೇಧಿತ ವಸ್ತುಗಳ ಪಟ್ಟಿಯನ್ನು ಬರೆದಿದ್ದ ಫಲಕದಲ್ಲಿ “INFLAMMABLE ARTICLES" ಎಂಬ ಇಂಗ್ಲಿಷ್ ಪದಪುಂಜಕ್ಕೆ "ಸ್ಫೋಟಕ ಲೇಖನಗಳು" ಎಂದು ಕನ್ನಡ ಭಾಷಾಂತರವಾದದ್ದಿತ್ತು. ಇದೀಗ ಝಾರ್ಖಂಡ್ ರಾಜ್ಯದ ಹಟಿಯಾ ಮತ್ತು ಬೆಂಗಳೂರು ದಂಡು (ಕಾಂಟೋನ್ಮೆಂಟ್) ರೈಲುನಿಲ್ದಾಣಗಳ ನಡುವೆ ಓಡುವ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳ ಮೇಲೆ ಬದಿಯಲ್ಲಿ "HATIA BENGALURU CANT EXPRESS" ಎಂಬ ಆಂಗ್ಲ ಫಲಕದ ಪಕ್ಕದಲ್ಲಿ ಕನ್ನಡದಲ್ಲಿ “ಹಟಿಯಾ ಬೆಂಗಳೂರು ಕ್ಯಾಂಟ್ ವ್ಯಕ್ತಪಡಿಸು" ಎಂದು ರಾರಾಜಿಸುತ್ತಿರುವುದನ್ನು ನೋಡಿದರೆ ಏನು ವ್ಯಕ್ತಪಡಿಸಬೇಕೆಂದೇ ತೋಚುತ್ತಿಲ್ಲವಾಗಿದೆ. "CANT EXPRESS"ಅನ್ನು "ವ್ಯಕ್ತಪಡಿಸಲಾಗುತ್ತಿಲ್ಲ" ಎಂದು ಭಾಷಾಂತರ ಮಾಡಿದ್ದಿದ್ದರೆ ಇನ್ನೂ ಚೆನ್ನಾಗಿರೋದು! [ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಕುಮಾರ್ ಜಕ್ಕಲಿ]
"A Chinese woman infected with the new coronavirus showed a dramatic improvement after she was treated with a cocktail of antivirals used to treat flu and HIV" ಎಂದು Reuters ವಾರ್ತಾಸಂಸ್ಥೆ ಇಂಗ್ಲಿಷ್‌ನಲ್ಲಿ ಪ್ರಕಟಿಸಿದ ಸುದ್ದಿಯನ್ನು ವನ್‌ಇಂಡಿಯಾ ಕನ್ನಡ ಪೋರ್ಟಲ್ “ಕೊರೊನಾ ವೈರಸ್ ಪೀಡಿತ ವೃದ್ಧೆಗೆ 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು. ವಿಸ್ಕಿ, ಬ್ರಾಂದಿ, ರಮ್, ಜಿನ್ ಹೀಗೆ ವಿವಿಧ ಬಗೆಯ ಮದ್ಯದ ಜೊತೆ ಹಣ್ಣಿನ ರಸವನ್ನು ಬೆರೆಸಿದ ರೋಗನಿರೋಧಕ ಔಷಧಿಯನ್ನು ನೀಡಲಾಯಿತು. ಈ ಚಿಕಿತ್ಸೆ ನೀಡಿದ ಬಳಿಕ ವೃದ್ಧೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬೆಡ್ ಮೇಲೆ ಸಹಜವಾಗಿ ಎದ್ದು ಕೂರುವಂತೆ ಆಗಿದೆ." ಎಂದು ಭಾಷಾಂತರಿಸಿ ಪ್ರಕಟಿಸಿದೆ! Cocktail (something resembling or suggesting such a drink as being a mixture of often diverse elements or ingredients) ಎಂದು ಕಂಡಾಕ್ಷಣ ಅದು ವಿಸ್ಕಿ, ಬ್ರಾಂದಿ,ರಮ್, ಜಿನ್‌ನದೇ ಮಿಶ್ರಣ ಎಂದುಕೊಂಡ ಪತ್ರಕರ್ತನ ಮೇಧಾವಿತನಕ್ಕೆ (ಮಧುಮೋಹಕ್ಕೆ?) ಏನನ್ನೋಣ! [ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಪವನ್ ಕೃಷ್ಣ]
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ನಾಗಾಲೋಟ ಸರಿ. ನಾಲ್ಕು ಕಾಲ್ಗಳ ಓಟ -> ನಾಲ್ಕಾಲೋಟ -> ನಾಗಾಲೋಟ ಎಂದು ಈ ಪದದ ವ್ಯುತ್ಪತ್ತಿ. ಕುದುರೆ, ಚಿರತೆ ಮುಂತಾದ ಪ್ರಾಣಿಗಳು ಓಡುವಾಗ ನಾಲ್ಕೂ ಕಾಲುಗಳನ್ನು ಒಂದು ಲಯಬದ್ಧ ರೀತಿಯಲ್ಲಿ ಬಳಸಿ ಓಟದ ಗತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಆ ದೃಷ್ಟಿಯಿಂದ ಮನುಷ್ಯರದು ನಾಗಾಲೋಟ ಆಗಲಿಕ್ಕೆ ಸಾಧ್ಯವಿಲ್ಲ. ‘ನಾಗಲೋಟ’ ಎಂದು ಬರೆಯುವುದು, ಈ ಪದದ ವ್ಯುತ್ಪತ್ತಿಯಲ್ಲಿ ‘ನಾಗ’(ಸರ್ಪ)ಗಳದೂ ‘ಲೋಟ’ದ್ದೂ ಪಾತ್ರವಿದೆ ಎಂದು ತಿಳಿದುಕೊಳ್ಳುವುದು ಕೂಡ ತಪ್ಪು.
ಆ) ಗಿರಕಿ ಸರಿ. ತಲೆಕೆಳಕಾಗಿ ಬೀಳುವಿಕೆ, ಲಾಗ, ದಿಂಡುರುಳು, ಚಕ್ರಾಕಾರವಾಗಿ ಸುತ್ತುವುದು ಮುಂತಾದ ಅರ್ಥಗಳನ್ನು ಪ್ರೊ.ಜಿ.ವಿ ಅವರು ಸೂಚಿಸಿದ್ದಾರೆ. “ನನ್ನ ಮುಂದಿನ ಸ್ಕ್ರೀನ್‌ನಲ್ಲಿ ವಿಮಾನ ಅಲ್ಲಿ ಗಿರಾಕಿ ಹೊಡೆಯುತ್ತಿರುವುದು ವಿಮಾನ ಪಥದಿಂದ ಗೊತ್ತಾಯಿತು. ನನಗೆ ಸಣ್ಣ ದಿಗಿಲು. ಅರ್ಧ ದಾರಿ ಕ್ರಮಿಸಿದ ಬಳಿಕ ಹೀಗೇಕೆ ಗಿರಾಕಿ ಹೊಡೆಯುತ್ತಿದ್ದಾನೆ ಎಂಬ ಕೌತುಕ...." ಎಂದು ೧೩ಫೆಬ್ರವರಿ೨೦೨೦ರ ನೂರೆಂಟು ವಿಶ್ವ ಅಂಕಣಬರಹದಲ್ಲಿ ವಿಶ್ವೇಶ್ವರ ಭಟ್ಟರು ಎರಡೆರಡು ಬಾರಿ ಗಿರಕಿ ಪದವನ್ನು ಗಿರಾಕಿ ಎಂದು ಬರೆದಿದ್ದರು. [ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಕೆ.ಆರ್ ಪ್ರೇಮಚಂದ್ರ]. ಗಿರಾಕಿ ಪದಕ್ಕೆ ಬೇರೆ ಅರ್ಥವಿರುವುದರಿಂದ ‘ಗಿರಕಿ’ಯನ್ನು ‘ಗಿರಾಕಿ’ ಎಂದು ಬರೆದಾಗ ಮತ್ತೂ ಆಭಾಸ.
ಇ) ದರೆ ಸರಿ. ಎತ್ತರದ ದಿಬ್ಬ, ಗುಡ್ಡ ಎಂಬ ಅರ್ಥ. ಅಚ್ಚಕನ್ನಡ ಮತ್ತು ತುಳು ಭಾಷೆಯಲ್ಲೂ ಇರುವ ಪದವಾದ್ದರಿಂದ ಮಹಾಪ್ರಾಣಾಕ್ಷರ ಇರುವುದಿಲ್ಲ. ಇದನ್ನು ಈಹಿಂದೆಯೂ ಸ್ವಚ್ಛ ಭಾಷೆ ಕಲಿಕೆಯಲ್ಲಿ ವಿವರಿಸಲಾಗಿತ್ತು. ಮೊನ್ನೆ ಕಾರ್ಕಳದ ಸಮೀಪ ಮಾಳದಲ್ಲಿ ಪ್ರವಾಸಿ ಬಸ್ ಗುಡ್ಡಕ್ಕೆ ಬಡಿದು ಸಂಭವಿಸಿದ ಭೀಕರ ಅಪಘಾತ ಸುದ್ದಿಯನ್ನು ವಿಜಯಕರ್ನಾಟಕ ಪತ್ರಿಕೆಯ (೧೬ಫೆಬ್ರವರಿ೨೦೨೦) ಮಂಗಳೂರು ಆವೃತ್ತಿಯು “ಕಾರ್ಕಳದಲ್ಲಿ ಧರೆಗೆ ಗುದ್ದಿದ ಬಸ್" ಎಂಬ ಶೀರ್ಷಿಕೆಯೊಂದಿಗೆ ಮುಖಪುಟದಲ್ಲಿ ಪ್ರಕಟಿಸಿತ್ತು. [ಗಮನಿಸಿ ಕಳುಹಿಸಿದವರು ಮಾಳದಿಂದ ಕೇಶವ ಡೋಂಗ್ರೆ]. ಧರೆ ಅಂದರೆ ಭೂಮಿ. ದರೆ ಅಂದರೆ ಗುಡ್ಡ.
ಈ) ಉಪಾಹಾರ ಸರಿ. ಉಪ + ಆಹಾರ = ಉಪಾಹಾರ. ಸವರ್ಣದೀರ್ಘ ಸಂಧಿ. ಇದನ್ನು ‘ಉಪಹಾರ’ ಎಂದು ತಪ್ಪಾಗಿ ಬರೆದೂಬರೆದೂ ಅದೇ ಸರಿಯೇನೋ ಎಂಬಂತಾಗಿದೆ. ಫಲಾಹಾರ, ಉಪಾಹಾರ, ಶಾಕಾಹಾರ (ಶಾಖಾಹಾರ ಅಲ್ಲ. ಶಾಕ ಅಂದರೆ ತರಕಾರಿ. ಶಾಕ + ಆಹಾರ = ಶಾಕಾಹಾರ), ಮಾಂಸಾಹಾರ... ಈ ಎಲ್ಲ ಪದಗಳಲ್ಲೂ ‘ಆಹಾರ’ ಇರುವುದರಿಂದ ಅಲ್ಲಿ ‘ಆ’ಕಾರ ಬರಲೇಬೇಕು.
ಉ) ಉರವಣೆ ಸರಿ. ಆತುರ, ಅವಸರ, ಸಂಭ್ರಮ, ರಭಸ, ಹೆಚ್ಚಳ ಎಂದು ಅರ್ಥ. ಮಾರನ ಉರವಣೆ ಎಂದರೆ ಕಾಮಾತುರ. ಬಭ್ರುವಾಹನ ಚಿತ್ರದ ‘ಆರಾಧಿಸುವೆ ಮದನಾರಿ...’ ಹಾಡಿನ ಚರಣದಲ್ಲಿ ಬರುವುದು “ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೆ ಪರಿಹರಿಸು..." ಎಂದು.