ವುಹಾನ್: ಚೀನಾದಲ್ಲಿ ಕೊರೋನಾ ವೈರಸ್ ಮತ್ತಷ್ಟು ಜನರನ್ನು ಬಲಿ ಪಡೆದುಕೊಂಡಿದ್ದು, ಸಾವಿಗೀಡಾದವರ ಸಂಖ್ಯೆ 360 ಕ್ಕಿಂತಲೂ ಮಿಕ್ಕಿದೆ ಜೊತೆಗೆ 17 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಮಾರಿ ವ್ಯಾಪಿಸಿದ್ದು, ಇದರಲ್ಲಿ 2,829 ಮಂದಿಯಲ್ಲಿ ವೈರಸ್ ಇರುವುದು ದೃಢಪಟ್ಟಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಈ ನಡುವೆ ಫಿಲಿಪ್ಪೀನ್ಸ್ ನಲ್ಲಿ ಕೊರೋನಾಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಇದು ಚೀನಾದ ಹೊರಗೆ, ಕೊರೋನಾ ವೈರಸ್ ನಿಂದಾಗಿ ರೋಗಿಯೊಬ್ಬ ಸಾವನ್ನಪ್ಪಿದ ಮೊದಲ ಪ್ರಕರಣವಾಗಿದೆ. ವೈರಸ್ ಹರಡದಂತೆ ತಡೆಯಲು ಚೀನಾ ಸಾಕಷ್ಟು ಹೆಣಗಾಡುತ್ತಿದ್ದು, ಹಲವು ನಗರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ವೆನ್ಜೌ ನಲ್ಲಿ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಮನೆಗಳಲ್ಲಿಯೇ ಉಳಿದುಕೊಳ್ಳುವಂತೆ ಮನವಿ ಮಾಡಿಕೊಂಡಿದೆ. ವೆನ್ಝೌ ವೂಹಾನ್ ನಿಂದ 500 ಮೀಟರ್ ಗಳಷ್ಟು ದೂರದಲ್ಲಿಯೇ ಇರುವುದರಿಂದ ವೈರಸ್ ಹರಡುವ ಸಾಧ್ಯತೆಗಳಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ??ಂದು ತಿಳಿದುಬಂದಿದೆ. ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಹಾಗೂ ಯುಕೆ, ಅಮೆರಿಕಾದಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಜಂಟಿ ಪ್ರತಿಕ್ರಿಯೆ ನೀಡುವುದಾಗಿ ಜರ್ಮನಿ ಆರೋಗ್ಯ ಸಚಿವ ಜೆನ್ಸ್ ಸ್ಪಾಹ್ನ್ ಅವರು ಹೇಳಿದ್ದಾರೆ.
ಈ ನಡುವೆ ವೈರಸ್ ಹರಡುವ ಭೀತಿಯಿಂದಾಗಿ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಹಾಗೂ ಇಸ್ರೇಲ್ ರಾಷ್ಟ್ರಗಳು ವಿದೇಶಿ ಪ್ರಜೆಗಳಿಗೆ ನಿಷೇಧ ಹೇರಿದ್ದು, ಚೀನಾಗೆ ಪ್ರಯಾಣಿಸದಂತೆ ತಿಳಿಸಿದೆ. ಅಷ್ಟೇ ಅಲ್ಲದೆ, ಚೀನಾಗೆ ಈಗಾಗಲೇ ಪ್ರಯಾಣ ಬೆಳೆಸಿದ ತಮ್ಮ ರಾಷ್ಟ್ರದ ಪ್ರಜೆಗಳೂ ಕೂಡ ರಾಷ್ಟ್ರಕ್ಕೆ ಪ್ರಯಾಣಿಸಿದಂತೆ ಎಚ್ಚರಿಕೆ ನೀಡಿದೆ. ಈ ನಡುವೆ ಮಂಗೋಲಿಯಾ, ರಷ್ಯ ನೇಪಾಳ ರಾಷ್ಟ್ರಗಳು ಗಡಿಗಳನ್ನು ಸಂಪೂರ್ಣ ಬಂದ್ ಮಾಡಿವೆ.