ವಾರಾಣಸಿ: ರಾಷ್ಟ್ರೀಯ ಹಿತದೃಷ್ಟಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಪಪಡಿಸಿದ್ದಾರೆ.
ಭಾರತೀಯ ಜನ ಸಂಘದ ಮಾಜಿ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಯನ್ನು ನಿನ್ನೆ ವಾರಣಾಸಿಯಲ್ಲಿ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಹಿತದೃಷ್ಟಿಯಿಂದ ದಶಕಗಳಿಂದ ಬಾಕಿ ಉಳಿದಿದ್ದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಈ ವಿಚಾರಗಳಲ್ಲಿ ನಮ್ಮ ಸರ್ಕಾರ ಅಚಲವಾಗಿದೆ ಎಂದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಯಾವಾಗಲೂ ಕಡುಬಡವರ ಬಗ್ಗೆ ಗಮನ ಹರಿಸುತ್ತಿದ್ದರು. ಅವರ ಸ್ವಾವಲಂಬನೆ ಮತ್ತು ಸ್ವ- ಸೇವೆ ಪರಿಕಲ್ಪನೆ ಆಧಾರದ ಮೇಲೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಉಚಿತ ಅಡುಗೆ ಅನಿಲ ಪೂರೈಕೆ , ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ಕಡುಬಡವರಿಗೆ ನೀಡಲಾಗುತ್ತಿರುವುದಾಗಿ ತಿಳಿಸಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಆತ್ಮ ಯಾವಾಗಲೂ ಪ್ರೇರಣೆ ನೀಡುತ್ತಿರುತ್ತದೆ. ಹಾಗಾಗೀ ಬಡವರ ಪರ ಕೆಲಸಗಳನ್ನು ಮುಂದುವರೆಸಲಾಗಿದೆ. ವಾರಾಣಸಿಯಲ್ಲಿ 25 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳು ಪೂರ್ಣವಾಗಿರಬೇಕು ಅಥವಾ ನಡೆಯುತ್ತಿರಬಹುದು.ಆಸ್ಪತ್ರೆ, ಶಾಲೆ, ರಸ್ತೆ, ಮೇಲ್ಸುತುವೆ ಮತ್ತು ನೀರಾವರಿ ಯೋಜನೆ ಸೇರಿದಂತೆ ಸುಮಾರು 12 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ಪಶ್ಚಿಮ ಉತ್ತರ ಪ್ರದೇಶವನ್ನು ಮೆಡಿಕಲ್ ಹಬ್ ಆಗಿ ಪರಿವರ್ತಿಸುವ ಪ್ರಯತ್ನ ಸಾಗಿದೆ ಎಂದರು.
ದೇಶದಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಕುರಿತು ಮಾತನಾಡುತ್ತೇವೆ. ಆದರೆ, ಪ್ರವಾಸೋದ್ಯಮ ಬಹುಮುಖ್ಯ ಎಂಬುದನ್ನು ಅರಿತುಕೊಳ್ಳಬೇಕಿದೆ. ಗುರಿ ಸಾಧಿಸುವಲ್ಲಿ ಪರಿಸರ ಹೊರತುಪಡಿಸಿದಂತೆ ಪಾರಂಪರಿಕ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣ ಸದ್ಯದಲ್ಲಿಯೇ ಹೊಸ ರೂಪ ಪಡೆಯಲಿದೆ. ಅಯೋಧ್ಯೆಯಲ್ಲಿನ ರಾಮ ಮಂದಿರ ನೈಜ ರೂಪ ಪಡೆದುಕೊಳ್ಳಲಿದೆ ಎಂದು ಪ್ರಧಾನಿ ಹೇಳಿದರು.