ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಶುಕ್ರವಾರ 42ಕ್ಕೆ ಏರಿಕೆಯಾಗಿದ್ದು, ಗಲಭೆ ಪೀಡಿತ ಪ್ರದೇಶಗಳಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.
ಈ ಕುರಿತಂತೆ ದೆಹಲಿ ಆರೋಗ್ಯ ಇಲಾಖೆ ಶುಕ್ರವಾರ ಮಾಹಿತಿ ನೀಡಿದ್ದು, ಹಿಂಸಾಚಾರದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದವರ ಪೈಕಿ ಹಲವರು ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಆ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿಕೆಯಾದಂತಾಗಿದೆ. ಪ್ರಸ್ತುತ ದೆಹಲಿ ಶಾಂತಿಯುತವಾಗಿದ್ದು, ಹಿಂಸಾಚಾರ ಪೀಡಿತ ಪ್ರದೇಶಗಳೂ ಕೂಡ ಸಹಜಸ್ಥಿತಿಯತ್ತ ಮರಳುತ್ತಿವೆ. ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸರಿ ಸುಮಾರು 7000ಕ್ಕೂ ಅಧಿಕ ಪ್ಯಾರಾಮಿಲಿಟರಿ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಅಲ್ಲದೆ ನೂರಾರು ಪೆÇಲೀಸರು ಹಿಂಸಾಚಾರಕ್ಕೆ ತುತ್ತಾಗಿದ್ದ ಈಶಾನ್ಯ ದೆಹಲಿಯ ಜಾಫ್ರಾಬಾದ್, ಮೌಜ್‍ಪುರ, ಚಂದ್ ಬಾಗ್, ಖುರೇಜಿ ಖಾಸ್ ಮತ್ತು ಭಜನ್‍ಪುರ್ ನಲ್ಲಿ ಮೊಕ್ಕಾಂ ಹೂಡಿದ್ದು, ಶಾಂತಿ ಸುವ್ಯವಸ್ಥೆಯ ಪಾಲನೆಯಲ್ಲಿ ತೊಡಗಿದ್ದಾರೆ.