ಲಖನೌ: ಅಯೋಧ್ಯೆ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಉತ್ತರ ಪ್ರದೇಶ ಸರ್ಕಾರ ನೀಡಿದ ಐದು ಎಕರೆ ಜಮೀನನಲ್ಲಿ ಮಸೀದಿ, ಭಾರತ-ಇಸ್ಲಾಮಿಕ್ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ನಿರ್ಮಿಸುವುದಾಗಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸೋಮವಾರ ಹೇಳಿದೆ.
ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬೋರ್ಡ್ ಅಧ್ಯಕ್ಷ ಜುಫರ್ ಫಾರೂಖಿ ಅವರು ವರದಿಗಾರರಿಗೆ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಉತ್ತರ ಪ್ರದೇಶ ಸರ್ಕಾರ ನಮಗೆ ಹಂಚಿಕೆ ಮಾಡಿರುವ ಜಮೀನನ್ನು ಸ್ವೀಕರಿಸಲು ಬೋರ್ಡ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಸೀದಿ, ಆಸ್ಪತ್ರೆ ನಿರ್ಮಾಣ ಸಂಬಂಧ ಶೀಘ್ರದಲ್ಲೇ ಟ್ರಸ್ಟ್ ವೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.ಸ್ಥಳೀಯ ಅಗತ್ಯಗಳನ್ನು ಆಧರಿಸಿ ಮಸೀದಿಯ ಗಾತ್ರದ ಬಗ್ಗೆ ನಿರ್ಧರಿಸಲಾಗುವುದು ಫಾರೂಖಿ ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿ ಮಸೀದಿ ನಿರ್ಮಿಸುವುದಕ್ಕಾಗಿ 5 ಎಕರೆ ಜಮೀನನ್ನು ಸುನ್ನಿ ವಕ್ಫ್ ಬೋರ್ಡ್ ಗೆ ಹಂಚಿಕೆ ಮಾಡಿತ್ತು.