ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ನಿನ್ನೆ ನಡೆದ ಚುನಾವಣೆಯಲ್ಲಿ ಸಂಜೆ 6 ಗಂಟೆಗಳ ವರೆಗೆ 54% ಮತದಾನವಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳು ಧ್ವಜ ಮೆರವಣಿಗೆ ನಡೆದಿರುವುದಾಗಿ ತಿಳಿದುಬಂದಿದೆ.
ಕಳೆದ 2015 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಶೇ 67.12 ರಷ್ಟು ಮತದಾನ ನಡೆದಿತ್ತು. ಒಟ್ಟು 13,571 ಮತಕೇಂದ್ರಗಳಲ್ಲಿ 13,571 ಮತಗಟ್ಟೆಗಳಿದ್ದು 1 ಲಕ್ಷದ 024 ಅಧಿಕಾರಿಗಳು ಮತಗಟ್ಟೆಗಳಲ್ಲಿ ಸೇವಾನಿರತರಾಗಿದ್ದಾರೆ. ಒಟ್ಟು 1 ಕೋಟಿಯ 47 ಲಕ್ಷದ 86 ಸಾವಿರದ 382 ದಾಖಲಾದ ಮತದಾರರಿದ್ದು ಅವರಲ್ಲಿ 66 ಲಕ್ಷದ 80 ಸಾವಿರದ 277 ಮಹಿಳೆಯರು ಮತ್ತು 81 ಲಕ್ಷದ 05 ಸಾವಿರದ 236 ಪುರುಷ ಮತದಾರರಾಗಿದ್ದಾರೆ.ಈ ಬಾರಿ 672 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಬೆಳಗ್ಗೆ 9 ಗಂಟೆಯ ಹೊತ್ತಿಗೆ ಶೇಕಡಾ 3.66ರಷ್ಟು ಮತದಾನವಾಗಿತ್ತು.
ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಿತು. ಆಮ್ ಆದ್ಮಿ ಪಾರ್ಟಿ ಮತ್ತೊಮ್ಮೆ 5ವರ್ಷಗಳ ಅವಧಿಗೆ ಅಧಿಕಾರಕ್ಕೆ ಬರುವ ಆಸೆಯಲ್ಲಿದ್ದರೆ ಭಾರತೀಯ ಜನತಾ ಪಾರ್ಟಿ ದೆಹಲಿಯಲ್ಲಿ ಅಧಿಕಾರ ಹೊಂದುವ ಕನಸು ಕಾಣುತ್ತಿದೆ. 1998ರಿಂದ 2013ರವರೆಗೆ 15 ವರ್ಷಗಳ ಕಾಲ ದೆಹಲಿಯಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಕೆಲವು ಸ್ಥಾನಗಳನ್ನಾದರೂ ಪಡೆಯುವ ಕನಸಿನಲ್ಲಿದೆ. ಕಾಂಗ್ರೆಸ್ ಮತ್ತು ಆಪ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ: ಮಜ್ನು ಕ ಟೀಲಾ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಅಲ್ಕ ಲಂಬಾ ಆಪ್ ಕಾರ್ಯಕರ್ತರಿಗೆ ಹೊಡೆಯಲು ಮುಂದಾದಾಗ ಗಲಾಟೆ ಏರ್ಪಟ್ಟಿತು. ಈ ಬಗ್ಗೆ ಆಪ್ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತೆ ಅಲ್ಕಾ ಲಂಬಾ ಅವರ ಜೊತೆ ಮತಗಟ್ಟೆ ಬಳಿ ಅನುಚಿತವಾಗಿ ವರ್ತಿಸಿದರು. ಲಂಬಾ ಅವರು ಸಿಂಗಲ್ ಮದರ್ ಆಗಿದ್ದು ಅವರ ಮಗನಿಗೆ ತಂದೆ ಯಾರು ಎಂದು ಆ ವ್ಯಕ್ತಿ ಪದೇ ಪದೇ ಕೇಳುತ್ತಲೇ ಇದ್ದನು. ಇದರಿಂದ ಕೋಪಗೊಂಡು ಅಲ್ಕಾ ಲಂಬಾ ಹೊಡೆಯಲು ಹೋದರು ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಮತಗಟ್ಟೆ ಅಧಿಕಾರಿ ಸಾವು:ಇನ್ನು ಬಬರ್ಪುರ್ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಪ್ರಾಥಮಿಕ ಶಾಲೆ ಶಿಕ್ಷಕ ಉದಮ್ ಸಿಂಗ್ ಮೃತಪಟ್ಟ ಘಟನೆ ನಡೆದಿದೆ. ಇಂದು ಬೆಳಗ್ಗೆ 6.30ರ ಹೊತ್ತಿಗೆ ಮತಗಟ್ಟೆಗೆ ಕರ್ತವ್ಯಕ್ಕೆ ಹಾಜರಾದ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು, ಉಸಿರಾಟ ತೊಂದರೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.