ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ನಿಗಾದಲ್ಲಿರುವವರಿಗೆ ರೋಗಬಾಧೆಯಿಲ್ಲ ಎಂಬುದಾಗಿ ಆರೋಗ್ಯವೈದ್ಯಾಧಿಕಾರಿ ಡಾ. ಎ.ಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ. ಚೀನಾದಿಂದ ಆಗಮಿಸಿರುವವರನ್ನು ಕೊರೋನಾ ವೈರಸ್ ಸಂಶಯದಲ್ಲಿ ಸುಮಾರು 70ಮಂದಿಯ ಮೇಲೆ ನಿಗಾದಲ್ಲಿರಿಸಲಾಗಿದ್ದು, ಇವರ ಬಗ್ಗೆ ಗೌಪ್ಯತೆ ಪಾಲಿಸಬೇಕಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊರತುಪಡಿಸಿ, ಬೇರೆಯಾರಿಗೂ ಮಾಹಿತಿ ನೀಡಲಾಗದು. ವೈರಸ್ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಜಾಗ್ರತೆ ಪಾಲಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.
ಲೆಕ್ಕಾಚಾರ ಪ್ರಕಾರ ಮತ್ತಷ್ಟು ಮಂದಿ ಆರೋಗ್ಯ ಇಲಾಖೆಗೆ ಮಾಹಿತಿನಬೀಡಬೇಕಾಗಿದ್ದು, ಕೆಲವರು ಇನ್ಯಾವುದೋ ಕಾರಣದಿಂದ ಇಲಾಖೆಗೆ ಮಾಹಿತಿ ನೀಡುತ್ತಿಲ್ಲ. ಅವರ ಆರೋಗ್ಯದ ಹಿತದೃಷ್ಟಿಯಿಂದ ಇಲಾಖೆಗೆ ಮಾಹಿತಿ ನೀಡುವುದು ಒಳಿತು. ಇವರ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಕ್ಕೆ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಕಾಞಂಗಾಡಿನಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೊಲೇಶನ್ ವಾರ್ಡುಗಳನ್ನು ತೆರೆಯಲಾಗಿದೆ. ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ವೈರಸ್ ಬಗ್ಗೆ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ಹಾಗೂ ಕೈಗವಚ, ಮಾಸ್ಕ್ ಹಾಗೂ ಇತರ ರಕ್ಷಣಾ ಕವಚ ಧರಿಸುವ ಬಗ್ಗೆ ಮಾಹಿತಿ ನೀಡಲಾಯಿತು.