ಕೊಲ್ಲಂ: ವಿದ್ಯೆ ಕಲಿಯಲು ವಯಸ್ಸಿಲ್ಲ ಎಂಬದನ್ನು ಕೇರಳದ 105 ವರ್ಷದ ಅಜ್ಜಿಯೊಬ್ಬರು ಸಾಬೀತು ಪಡಿಸಿದ್ದಾರೆ. 105ನೇ ವರ್ಷದಲ್ಲಿ ಫಸ್ಟ್? ಕ್ಲಾಸ್?ನಲ್ಲಿ 4ನೇ ತರಗತಿ ಪಾಸ್ ಆಗಿ ಅಚ್ಚರಿಗೆ ಕಾರಣರಾಗಿದ್ದಾರೆ.
ಕೊಲ್ಲಂ ಜಿಲ್ಲೆಯ 105 ವರ್ಷದ ಭಾಗೀರಥಿ ಎಂಬ ವೃದ್ಧೆ ತಮ್ಮ ಇಳಿವಯಸ್ಸಿನಲ್ಲಿ 4ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಕೇವಲ ಪಾಸ್ ಅಗಿರುವುದು ಮಾತ್ರವಲ್ಲದೆ ಶೇ. 74.5 ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಕೇರಳದ ಸಾಕ್ಷರತಾ ಮಿಷನ್ ಹಮ್ಮಿಕೊಂಡಿರುವ ಸಮಾನತೆ ಪರೀಕ್ಷೆಯ 4ನೇ ತರಗತಿ ಪರೀಕ್ಷೆಯಲ್ಲಿ ಭಾಗೀರಥಿ ಅಜ್ಜಿ 275ಕ್ಕೆ 205 ಅಂಕಗಳನ್ನು ಗಳಿಸಿದ್ದಾರೆ.ಬಾಲ್ಯದಲ್ಲೇ ವಿವಾಹವಾಗಿದ್ದರಿಂದ ಭಾಗೀರಥಿ ಅವರ ಓದಿನ ಕನಸು ಕನಸಾಗೇ ಉಳಿದಿತ್ತು. ನಂತರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಂದು ಸಂಸಾರದೊಳಗೆ ಮುಳುಗಿದ ಅವರು ಈಗ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕೇರಳ ಸರ್ಕಾರ ಹಮ್ಮಿಕೊಂಡಿರುವ ಸಾಕ್ಷರತಾ ಮಿಷನ್? ಯೋಜನೆಯ ಮೂಲಕ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅಜ್ಜಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದನ್ನು ತಿಳಿದು ಮನೆಮಂದಿಯೆಲ್ಲ ಅವರಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದ್ದಾರೆ.3ನೇ ತರಗತಿಯಲ್ಲಿ ಓದುತ್ತಿದ್ದ ಭಾಗೀರಥಿ ತಾಯಿ ತೀರಿಕೊಂಡ ನಂತರ ತಮ್ಮನನ್ನು ನೋಡಿಕೊಳ್ಳುವ ಸಲುವಾಗಿ ಶಾಲೆಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು.
9ನೇ ವಯಸ್ಸಿನಲ್ಲಿ ಮನೆಯಲ್ಲೇ ಉಳಿಯುವಂತಾದ ಅವರಿಗೆ ಅದಾದ ಕೆಲವೇ ವರ್ಷಗಳಲ್ಲಿ ಮದುವೆಯಾಯಿತು. ತಮ್ಮ 30ನೇ ವರ್ಷದಲ್ಲಿ ಗಂಡನನ್ನು ಕಳೆದುಕೊಂಡಾಗ ನಾಲ್ವರು ಹೆಣ್ಣುಮಕ್ಕಳು ಸೇರಿದಂತೆ ತನ್ನ ಆರು ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಈ ಶತಾಯುಷಿ ಅಜ್ಜಿಯ ಅಕ್ಷರಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.