HEALTH TIPS

ರಾಜ್ಯದಲ್ಲಿ ಕನ್ನಡಿಗರಿಗೆ ಸಿಂಹ ಪಾಲು ಉದ್ಯೋಗಕ್ಕಾಗಿ ಮೀಸಲಾತಿ ಅಗತ್ಯ: 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ

   
       ಕಲಬುರಗಿ:  ಪ್ರತಿಯೊಂದು ಮಗುವೂ ಮಾತೃಭಾಷೆಯಲ್ಲಿ ಕಲಿಯುವುದು ಅಗತ್ಯವೆಂದಾದಲ್ಲಿ ನೀವು ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಹೇರಿದಲ್ಲಿ ಕನ್ನಡೇತರ ಅನ್ಯಭಾಷಿಕರ ಮೂಲಭೂತ ಹಕ್ಕಿಗೆ, ಮಕ್ಕಳು ಅವರವರ ಮಾತೃ ಭಾಷೆಯಲ್ಲಿ ಕಲಿಯುವ ಹಕ್ಕಿಗೆ ಚ್ಯುತಿಯೊದಗುತ್ತದೆ, ನಮ್ಮ ಮೂಲಭೂತ ಹಕ್ಕನ್ನು ನಾವು ಅನುಭವಿಸಲು ಬಿಡಿ ಎಂಬುಬುದ ಮುಖವಾಡದ ಮಾತು. ಯಾವುದು ಪರಿಸರ ಭಾಷೆಯೋ ಅದರಲ್ಲಿ ಮಾತ್ರ ಮಕ್ಕಳು ಲೋಕಾಕೃತಿಯನ್ನು ಚೆನ್ನಾಗಿ ಗ್ರಹಿಸಬಲ್ಲರು. ಆದ ಕಾರಣ ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಪ್ರತಿಪಾದಿಸಿದ್ದಾರೆ.
      ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಜಯ ಪ್ರಧಾನ ವೇದಿಕೆಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳಾನಾಧ್ಯಕ್ಷರ ಭಾಷಣ ಮಾಡಿ ಅವರು ಮಾತನಾಡಿದರು.
      ಮಗುವೊಂದು ತನ್ನ ಪಂಚೇಂದ್ರಿಯಗಳಿಂದ ಸಹಜವಾಗಿ ಗ್ರಹಿಸಿದ ಲೋಕ ಗ್ರಹಿಕೆಯು ಪರಿಷ್ಕಾರಗೊಳ್ಳಬೇಕಾದದ್ದು ಪರಿಸರದ ಭಾಷೆಯಲ್ಲಿ. ಆಗ ಮಾತ್ರ ಅನುಭವ ಮತ್ತು ಅರಿವು ಒಂದಕ್ಕೊಂದು ಪೂರಕ-ಪೆÇೀಷಕವಾಗಿ ಮಗುವಿನ ಕಲಿಕೆ ಅನುಭವದ ನೆಲೆಗೆ ಏರುತ್ತದೆ. ಹಾಗಾಗದೆ ಇಂಗ್ಲಿಷ್ ಭಾಷೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಮಕ್ಕಳಿಗೆ ಬೋಧಿಸಿದರೆ ಅದು ಮಾಹಿತಿಗಳ ಒದಗಣೆ ಆಗುವುದೇ ವಿನಹ ಲೋಕಾನುಭವವು ಭಾಷಾನುಭವವಾಗಿ ದಾಟಿಕೊಳ್ಳಲಾರದು ಎಂದು ಅಭಿಪ್ರಾಯಪಟ್ಟರು.
       ಪೆÇೀಷಕರು ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಆಗ್ರಹಿಸುವಾಗ ನಾವಾದರೂ ಏನು ಮಾಡಲಿಕ್ಕೆ ಸಾಧ್ಯ? ಬೇಡಿಕೆಯ ಅನುಸಾರ ಪೂರೈಕೆ ನಡೆಸಬೇಕಾದದ್ದು ನಮ್ಮ ಧರ್ಮ ಎನ್ನುತ್ತವೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಅಡಳಿತ ಮಂಡಳಿಗಳು. ಅದು ನಿಮ್ಮ ಧರ್ಮ ಹೌದು. ಆದರೆ ಅದು ವ್ಯಾಪಾರಿ ಧರ್ಮ. ಶಿಕ್ಷಣ ಒಂದು ವ್ಯಾಪಾರೀ ಉದ್ಯಮವಲ್ಲ. ಅನುಭವವನ್ನು ಮಾತಾಗಿಯೂ ಮಾತನ್ನು ಅನುಭವವಾಗಿಯೂ ಅಖಂಡತ್ವದಲ್ಲಿ ಸಿದ್ಧಿಸಿಕೊಳ್ಳುವ ವ್ಯಕ್ತಿರೂಪಣದ ಸೃಷ್ಟಿಶಾಲೆ. ಇಂಗ್ಲಿಷ್ ಅನ್ನವನ್ನು ಕೊಡುವ ಭಾಷೆ ಅನ್ನುವಿರೇ? ಎಂದು ಅವರು ಪ್ರಶ್ನಿಸಿದರು.
      ನಮ್ಮ ರೈತರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಅನ್ನ ಬೆಳೆಯುವ ಕೊಡುವ ನಿತ್ಯಾನುಷ್ಠಾನದಲ್ಲಿ ತತ್ಪರರಾಗಿದ್ದಾರೆ. "ರಾಜರು ಉದಿಸಲಿ ರಾಜರು ಅಳಿಯಲಿ ಬಿತ್ತುಳುವುದನವ ಬಿಡುವುದೆ ಇಲ್ಲ"-ಎಂದು ಕುವೆಂಪು ನೇಗಿಲಯೋಗಿ ಕವಿತೆಯಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯೋಣ. ಆ ಕವಿತೆ ಈಗ ನಮ್ಮ ಸರ್ಕಾರ ಅಂಗೀಕರಿಸಿರುವ ರೈತಗೀತೆಯೂ ಹೌದು. ಲಕ್ಷಾಂತರ ಕೂಲಿ, ಕಾರ್ಮಿಕ, ನಿತ್ಯಸೇವಾ ಜನರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಸ್ವಾಭಿಮಾನಿ ಬದುಕು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಢಿಸುವುದೆಂದರೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹ ಪಾಲು ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರುವುದು ಬಹು ಮುಖ್ಯ ಅಗತ್ಯ. ಅನ್ನ ಸಂಪಾದನೆಯು ಕೈಂಕರ್ಯ ಮತ್ತು ದುಡಿಮೆಯ ಕಾಯಕಯೋಗವಲ್ಲದೆ ಭಾಷಾ ಪರಿಣತಿಯ ಫಲವಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ. ಇಂಗ್ಲಿಷ್ ಮೀಡಿಯಮ್ಮಿನಲ್ಲಿ ಓದುವ ನಮ್ಮ ಮಕ್ಕಳು ಹೆಚ್ಚು ಜಾಣರಾಗುವರೇ? ಕರ್ನಾಟಕದ ದೊಡ್ಡ ವಿಜ್ಞಾನಿಗಳು, ಉದ್ಯಮಿಗಳು, ಕವಿ, ಸಾಹಿತಿಗಳು, ರಾಜಕೀಯ ಮುತ್ಸದ್ದಿಗಳು, ದೇಶಕ್ಕಾಗಿ ತಮ್ಮ ಬಾಳನ್ನೇ ಧಾರೆಯೆರೆದ ರಾಷ್ಟ್ರ ಪುರುಷರು ಕನ್ನಡ ಭಾಷೆಯಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಈಗ ಸಾಧನೆಯ ಉತ್ತುಂಗ ಶಿಖರವೇರಿರುವಂಥವರು. ಐನ್‍ಸ್ಟೈನ್‍ರಂಥ ಮಹಾ ವಿಜ್ಞಾನಿಗೂ ಜರ್ಮನ್ ಭಾಷೆಯೇ ಜ್ಞಾನದ ಮಾಧ್ಯಮವಾಗಿತ್ತು. ಇಂಗ್ಲಿಷ್ ಸಂವಹನದ ಭಾಷೆ ಮಾತ್ರ ಆಗಿತ್ತು ಎಂದು ವೆಂಕಟೇಶಮೂರ್ತಿ ಅಭಿಪ್ರಾಯ ಪಟ್ಟರು.
      ಅಸ್ಖಲಿತವಾಗಿ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡುವ ವಾಗ್ಮಿಗಳು ಸತ್ಯವಾಚಿಗಳೆಂದೂ ಹೇಳಲಾಗದು. ಅದಕ್ಕೇ ಭಾಷೆಯು ಹೇಗಿರಬೇಕೆಂದು ವಿವೇಚಿಸುವಾಗ ಬಸವಣ್ಣನವರು ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಫಟಿಕದ ಶಲಾಕೆ ಇವುಗಳ ಅನಂತರ ಲಿಂಗ ಮೆಚ್ಚಿ ಅಹುದೆನ್ನಬೇಕೆಂಬ ಪರಮಪ್ರಮೇಯವನ್ನು ಶೃಂಗ ಸ್ಥಾನದಲ್ಲಿ ಇರಿಸಿದ್ದು. ನಡೆ ನುಡಿ ಒಂದಾಗದ ಬದುಕು ಅಕ್ಷಮ್ಯವೆಂದು ಸತ್ಯನಿಷ್ಠುರವಾದ ಕಟೂಕ್ತಿಯನ್ನಾಡಿದ್ದು ಎಂದು ಅವರು ಹೇಳಿದರು.
     ನಮ್ಮ ಖಾಸಗಿ ವಿದ್ಯಾಸಂಸ್ಥೆಗಳನ್ನು ನಡೆಸುವ ಉದ್ಯಮಿಗಳು ಮಾತೃಭಾಷೆಯಲ್ಲಿ ಕಲಿಯುವುದು ಅನ್ಯಭಾಷಿಕರ, ಅಲ್ಪಸಂಖ್ಯಾತರ ಹಕ್ಕು ಮತ್ತು ಪೆÇೀಷಕರ ಬೇಡಿಕೆಯ ಒತ್ತಾಯ ಎನ್ನುವ ವಾದವನ್ನು ಮುಂದಿಟ್ಟು ಉಚ್ಚ ನ್ಯಾಯಾಲಯಕ್ಕೆ ಮೊರೆಹೋಗುತ್ತಾರೆ. ಆಗ ಉಚ್ಚ ನ್ಯಾಯಾಲಯವು ಕನ್ನಡ ಪರವಲ್ಲದ, ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವುದು ಪೆÇೀಷಕರ ಹಕ್ಕು ಅನ್ನುವ ತೀರ್ಪು ನೀಡುತ್ತದೆ. ಹಿಂದೆ ಅದೇ ಉಚ್ಚ ನ್ಯಾಯಾಲಯವು ಕನ್ನಡ (ಅಂದರೆ ತಾಯ್ನುಡಿ-ಪರಿಸರ ನುಡಿ) ಶಿಕ್ಷಣ ಮಾಧ್ಯಮವಾಗಬೇಕು ಎಂಬ ತೀರ್ಪು ನೀಡಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಮತ್ತೆ ನಾವು ನ್ಯಾಯಾಂಗದ ಮೊರೆಹೋಗಬೇಕಾದ, ಕಾನೂನಿನ ಹೋರಾಟ ನಡೆಸಬೇಕಾದ ತಿರುಮುರುವು ಸ್ಥಿತಿ ಉಂಟಾಗುತ್ತದೆ. ಶಿಕ್ಷಣ ಮಾಧ್ಯಮ ಕನ್ನಡ ಆಗಬೇಕು ಎನ್ನುವು ತತ್ವಕ್ಕೆ ಕಾನೂನಿನ ತೊಡಕುಗಳು ಉಂಟಾಗುವುವು ಎಂದು ಅವರು ಕನ್ನಡದ ಸ್ಥಿತಿಯನ್ನು ವಿವರಿಸಿದರು.
    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ, ಕನ್ನಡ ನಾಡಿನ ಹಿರಿಯ ಕವಿಗಳೂ, ನಾಟಕಕಾರರೂ ಆದ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಮತ್ತಿತರರು ಉಪಸ್ಥಿತರಿದ್ದರು.
       ಸಮ್ಮೇಳನಾಧ್ಯಕ್ಷರ ಭಾಷಣ ಪ್ರಮುಖ ಅಂಶಗಳು:
     ಕಲ್ಯಾಣ ಕರ್ನಾಟಕವೆಂದು ನವ ನಾಮಕರಣಗೊಂಡ ನಂತರ ಕಲಬುರಗಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿರುವುದು ನನ್ನ ಪಾಲಿನ ಪುಣ್ಯ. ಅನೇಕ ಗಂಡಾಂತರಗಳ ನಡುವೆ ಕನ್ನಡ ನಂದಾದೀಪವನ್ನು ಎದೆಗೂಡಲ್ಲಿ ಅರದುಳಿಸಿಕೊಂಡು ಬಂದ ಕರಿಮಣ್ಣಿನ ಹಣತೆ ಕಲಬುರಗಿ. ಶ್ರೀ ಶರಣ ಬಸವೇಶ್ವರ, ಪೂಜ್ಯ ಖ್ವಾಜಾ ಬಂದೇನವಾಜ್, ಮಹಾತ್ಮಗಾಂಧೀಜಿಯವರ ಭಾವೈಕ್ಯ ಪರಮ ಆಶಯವನ್ನು ಅಭಿವ್ಯಕ್ತಿಸಿದ ಪವಾಡ ಭೂಮಿ ಕಲಬುರಗಿ.ಕನ್ನಡ ಸಾಹಿತ್ಯ ಎಂಬ ಅವಿರತ ಜೀವನದಿಯ ತಲಕಾವೇರಿ, ದಾಸೀಮಯ್ಯ, ದುಗ್ಗಲೆ, ನಾಗಚಂದ್ರ, ಕೇಸಿರಾಜ, ಲಕ್ಷ್ಮೀಶ, ಅವಿನಾಳ ಕಲ್ಲಯ್ಯ, ಕಡಕೋಳ ಮಡಿವಾಳಪ್ಪ, ಹಜರತ್ ಸಾಬರು ಮುಂತಾದವರು ಜನ್ಮವೆತ್ತ ಭೂಮಿ ಇದು
     ಲಕ್ಷಾಂತರ ರೈತರು, ಕೂಲಿ ಕಾರ್ಮಿಕರು, ನಿತ್ಯ ಸೇವಾ ಜನರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಸ್ವಾಭಿಮಾನಿಯಾಗಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕನ್ನಡ ಅನ್ನದ ಭಾಷೆಯಾಗಬೇಕು. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಹೆಚ್ಚಾಗಬೇಕು.
    ಕರ್ನಾಟಕದ ದೊಡ್ಡ ದೊಡ್ಡ ವಿಜ್ಞಾನಿಗಳು, ಉದ್ಯಮಿಗಳು, ಕವಿ, ಸಾಹಿತಿಗಳು, ರಾಜಕೀಯ ಮುತ್ಸದ್ಧಿಗಳು ದೇಶಕ್ಕಾಗಿ ತಮ್ಮ ಬಾಳನ್ನೇ ಧಾರೆ ಎರೆದ ರಾಷ್ಟ್ರ ಪುರುಷರು ಕನ್ನಡ ಭಾಷೆಯಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಈಗ ಸಾಧನೆಯ ಉತ್ತುಂಗ ಶಿಖರಕ್ಕೇರಿರುವಂತಹವರು.
     ಶಿಕ್ಷಣ ಮಾಧ್ಯಮ ಮತ್ತು ಸಾಹಿತ್ಯ, ಸಂಸ್ಕøತಿಯ ಸಂಬಂಧ ಅತ್ಯಂತ ನಿಕಟವಾದುದು. ನಾವೆಲ್ಲ ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದವರು. ನಮಗೆ ಎಲೆ ಗೊತ್ತಿತ್ತು. ಒಲೆ ಗೊತ್ತಿತ್ತು. ಅಲ್ಲಿ ನಮ್ಮ ತಾಯಿ ಉರುವಲು ಹಾಕಿ ಅನ್ನ ತಯಾರಿಸುವುದು ಗೊತ್ತಿತ್ತು. ಸೂರ್ಯ ರಶ್ಮಿ, ಅದರ ಶಾಖ ಗೊತ್ತಿತ್ತು. ಒಂದು ನಿತ್ಯಾನುಭವದ ವಿಸ್ತರಣೆಯಾಗುತ್ತಿತ್ತು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಾದರೆ ಗ್ರಹಿಸಬೇಕಾದ ಸಂಗತಿ, ಮಾಧ್ಯಮದ ಭಾಷೆ ಈ ಎರಡರ ನಡುವೆ ಯಾವಾಗಲೂ ಬಿರುಕುಗಳು.
    ಪುಸ್ತಕವನ್ನು ಕಪಾಟಿನಲ್ಲಿ ಅವರು ಜೋಡಿಸುವರು ಅಷ್ಟೆ. ಮಸ್ತಕದಲ್ಲಿ ತುರುಕಿದ ಪುಸ್ತಕ ಮನೋಗತವಾಗಬಲ್ಲದೇ ಎಂದು ಪ್ರಶ್ನಿಸಿದರು. ಯಕ್ಷಗಾನ, ಭಜನಾ ಮಂಡಳಿ, ಪಾದಯಾತ್ರೆ, ತತ್ವಪದ, ಒಕ್ಕೊರಲಲ್ಲಿ ಹಾಡುತ್ತಿದ್ದ ಗೋವಿಂದ ನಾಮಾವಳಿ, ದಾಸರ ಪದಗಳು, ಗಂಟೆ ಜಾಗಟೆಯ ಭೋರ್ಗರೆತ, ಶಾಲೆಯವರೆಗೆ ನಾವು ಕಲಿಯುತ್ತಿದ್ದ ವೈವಿಧ್ಯದ ಅನುಭವ.
       ಮರಗೆಲಸ ಗುಡಿಕಾರರು ಕಾಣುತ್ತಿಲ್ಲ. ಕೈ ಮಗ್ಗಗಳು ಬಂದ್ ಆಗಿವೆ. ನಾಟಕ, ಯಕ್ಷಗಾನ ಪ್ರಯೋಗಗಳು ಕ್ಷೀಣಿಸುತ್ತಿವೆ. ಸರ್ವಜ್ಞ, ಬಸವಣ್ಣ, ಕುಮಾರವ್ಯಾಸ, ಲಕ್ಷ್ಮೀಶ, ಪುರಂದರ ಕನಕರನ್ನು ಅವರ ರಚನೆಗಳನ್ನು ಮಾತುಗಳಲ್ಲಿ ಪ್ರಸ್ತಾಪಿಸುತ್ತಿದ್ದ ನಮ್ಮ ಹಳ್ಳಿಯ ಜನ ನಿಶ್ಶೇಷವಾಗಿದ್ದಾರೆ. ಅರಳೇಕಟ್ಟೆ, ದೇವಾಲಯದ ಅಂಗಳ ನಿರ್ಜನವಾಗಿದೆ.ಹಳ್ಳಿ ಹಳ್ಳಿಯಲ್ಲಿಯೂ ಕುಡಿಯುವ ಅಡ್ಡೆಗಳು ತಲೆ ಎತ್ತಿವೆ. ಗುಡಿ, ದರ್ಗಾ, ಮಸೀದಿ, ಚರ್ಚ್  ಗಳು ಜನರಿಂದ ದೂರವಾಗಿ ವಿಶ್ವದ ಬೇಕು-ಬೇಡದ ಎಲ್ಲಾ ಮಾಹಿತಿಗಳನ್ನು ನಡುಮನೆಗೆ ತಂದು ಸುರಿಯುವ ಟಿವಿಗಳು ಮನುಷ್ಯ ಸಂಬಂಧಗಳನ್ನು ದೂರವಾಣಿಯ ಮೂಲಕ ನಿಜದ ಭ್ರಮೆಗೆ ತರುವ ವ್ಯವಸ್ಥೆ ದ್ವಿಗುಣಿತವಾಗುತ್ತಿದೆ. ನಮ್ಮ ಅರ್ಥ ವ್ಯವಸ್ಥೆ, ಜೀವನ ಕ್ರಮ ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಸಂದರ್ಭದಲ್ಲಿ ಏನನ್ನು ಗಳಿಸುತ್ತಿದ್ದೇವೆ. ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಯೋಚಿಸುವ ವ್ಯವಧಾನ ಇಲ್ಲದಂತಾಗುತ್ತಿದೆ. ಗ್ರಾಮೀಣ ಬದುಕು ಕಳಾಹೀನವಾಗುತ್ತಿದೆ.
       ಅನುಭವವನ್ನು ಮಾತಾಗಿಯೂ; ಮಾತನ್ನು ಅನುಭವವಾಗಿಯೂ ಅಖಂಡತ್ವದಲ್ಲಿ ಸಿದ್ಧಿಸಿಕೊಳ್ಳುವ ವ್ಯಕ್ತಿ ರೂಪಣ ಸೃಷ್ಟಿಯೇ ಶಾಲೆ.  ಇಂಗ್ಲಿಷ್ ಅನ್ನ ಕೊಡುವ ಭಾಷೆ ಎನ್ನುವಿರಾ? ನಮ್ಮ ರೈತರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಅನ್ನ ಬೆಳೆಯುವ, ಕೊಡುವ ನಿತ್ಯಾನುಷ್ಠಾನದಲ್ಲಿ ತತ್ಪರರಾಗಿದ್ದಾರೆ. ನಮ್ಮ ಸರ್ಕಾರ ರೈತ ಗೀತೆಯನ್ನು ಅಂಗೀಕರಿಸಿಜe.
      ಭಾರತದಲ್ಲಿ ಲಿಪಿ ಇರುವ, ಇಲ್ಲದಿರುವ ಎಲ್ಲಾ ಭಾಷೆಗಳು ನಮ್ಮ ಅವ್ವನ ಹಾಡು, ನುಡಿಗಳೇ. ಹಾಗಾಗಿ ಅವೆಲ್ಲವೂ ನಮ್ಮ ರಾಷ್ಟ್ರ ಭಾಷೆಗಳೇ. ಹಿಂದಿಯವರು ಮಂದಿಯವರೇ ಎಂಬ ಬೇಂದ್ರೆಯವರ ನುಡಿಗೆ ನನ್ನ ಸಮ್ಮತವಿದೆ. ಆದರೆ ಹಿಂದಿಗೆ ಸಮಾನತೆಯಲ್ಲೂ ಪ್ರಥಮ ಸ್ಥಾನ ಬೇಕೆಂಬ ಮಾತನ್ನು ನಾನು ಒಪ್ಪಲಾರೆ ಯು.ಆರ್. ಅನಂತಮೂರ್ತಿಯವರು ಈ ರೀತಿಯ ಭಾಷೆಯನ್ನು ಅಬ್ಯೂಜಿಂಗ್ ಇಂಗ್ಲೀಷ್ ಎಂದು ಹೆಸರಿಸಿದ್ದರು. ನಾನದನ್ನು ಅಗ್ಗದಾಂಗ್ಲ ಎಂದು ಕರೆಯಬಯಸುತ್ತೇನೆ. ಸಿಂಗಪೂರದಲ್ಲಿ ಇಂಗ್ಲೀಷ್ ಬೇಕು, ಷೇಕ್ಸ್ ಪಿಯರ್ ಬೇಡ ಎಂಬ ಭಾಷಾ ಚಿಂತನೆ ಇದೆ. ನಾವು ಅಗತ್ಯವಿರುವಷ್ಟು ಇಂಗ್ಲೀಷ್ ಸಾಕು, ಷೇಕ್ಸ್ ಪಿಯರ್ ಕೂಡ ಬೇಕು ಎಂಬ ಸಿದ್ಧಾಂತ ರೂಪಿಸಿಕೊಳ್ಳಬೇಕು. ಇಂಗ್ಲೀಷ್ ಭಾಷೆಯನ್ನು ಐಚ್ಛಿಕ ಭಾಷೆಯನ್ನಾಗಿ ಕಲಿಸಬೇಕು. ಹಾಗೆ ಕಲಿತು ಸಮರ್ಥರಾದವರು ಇಂಗ್ಲೀಷ್ ನಲ್ಲಿರುವ ಸಾಹಿತ್ಯ, ವೈಚಾರಿಕ,ತಾತ್ವಿಕ, ವೈಜ್ಞಾನಿಕ ವಿಷಯದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಬೇಕು. ದಕ್ಕಬೇಕಾದ ಎಲ್ಲವೂ ನಮಗೆ ಕನ್ನಡದ ಮೂಲಕವೇ ದಕ್ಕಬೇಕು. ಬೆಂಗಾಳಿ, ಮರಾಠಿ, ರಷ್ಯನ್ ಭಾಷೆಯ ಮಹಾನ್ ಲೇಖಕರನ್ನು ನಾವು ಕನ್ನಡದ ಮೂಲಕವೇ ದಕ್ಕಿಸಿಕೊಂಡಿದ್ದೇವೆ ಎಂದು ಹೇಳಿದರು. ಅನುವಾದ ಎಂದರೆ ತತ್ಸಮವಲ್ಲ, ತದ್ಬವ. ಕನ್ನಡದಲ್ಲಿ ಬೇಂದ್ರೆಯವರ ಮೇಘದೂತ, ಕುವೆಂಪುರವರ ಶ್ರೀರಾಮಾಯಣದರ್ಶನಂ, ಪುತೀನರ ಶ್ರೀಹರಿಚರಿತ್ರೆ ಇದಕ್ಕೆ ಸೂಕ್ತ ಉದಾಹರಣೆ.
      ಕನ್ನಡವನ್ನು ವ್ಯವಹಾರ ಭಾಷೆ, ರಾಜ್ಯ ಭಾಷೆ, ಪರಿಸರ ಭಾಷೆ ಎಂದು ವಿಂಗಡಿಸಬೇಕು. ನಾವು ನಮ್ಮ ಮನೆಯಲ್ಲಿ ಮಕ್ಕಳ ಜೊತೆ ಕನ್ನಡದಲ್ಲಿ ಮಾತನಾಡಬೇಕು. ಒಂದು ವೇಳೆ ತಮಿಳರು ನಮ್ಮ ಮನೆಗೆ ಬಂದರೆ ಮಕ್ಕಳ ಜೊತೆ ಮನೆಯಲ್ಲಿ ತಮಿಳಿನಲ್ಲೇ ಮಾತನಾಡಿದರೆ ಅಭ್ಯಂತರವಿಲ್ಲ. ಆದರೆ ಬೀದಿಗೆ ಹೋದಾಗ ಕನ್ನಡದಲ್ಲೇ ಮಾತನಾಡಬೇಕು. ಇಲ್ಲಿನ ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ಎಲ್ಲಾ ವ್ಯವಹಾರಗಳಲ್ಲೂ ಕನ್ನಡ ಬಳಕೆಯಾಗಬೇಕು. ಪ್ರಾಥಮಿಕ ಶಾಲಾ ಶಿಕ್ಷಣ ಕನ್ನಡ ಭಾಷೆಯಲ್ಲೇ ಇರಬೇಕು. ಇಲ್ಲಿ ಕೆಲಸ ಮಾಡುವ ಎಲ್ಲರೂ ಕನ್ನಡ ಭಾಷೆಯನ್ನೇ ಕಲಿಯಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries