ಬದಿಯಡ್ಕ: ಮುಳ್ಳೇರಿಯಾ ಮಂಡಲಾಂತರ್ಗತ ನೀರ್ಚಾಲು ವಲಯದ ಫೆಬ್ರವರಿ ತಿಂಗಳ ವಲಯ ಸಭೆಯು ಶಿಮಲಡ್ಕ ನಾಗರಜ ಭಟ್ಟರ ಮನೆಯಲ್ಲಿ ಇತ್ತೀಚೆಗೆ ನಡೆಯಿತು.
ವಲಯ ಕಾರ್ಯದರ್ಶಿ ಮಹೇಶ ಕೃಷ್ಣ ಗತಸಭೆಯ ವರದಿ ವಾಚಿಸಿದರು. ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ ಲೆಕ್ಕಪತ್ರ ಮಂಡಿಸಿದರು.
ಮಹಾನಂದಿ ಗೋಲೋಕದಲ್ಲಿ ಮಾ. 4 ರಂದು ಕೃಷ್ಣಾರ್ಪಣಮ್ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ಈ ಸಂದರ್ಭದಲ್ಲಿ ಜರಗಲಿರುವ ಛತ್ರ ಸಮರ್ಪಣೆ, ವಿಷ್ಣು ಸಹಸ್ರನಾಮ ಪಾರಾಯಣ ಇವುಗಳ ಕುರಿತು ಮಾಹಿತಿ ವಿವರಣೆ ಮಾಡಲಾಯಿತು. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ನಿರ್ಮಾಣ ಕಾರ್ಯದ ಸಲುವಾಗಿ ವಲಯದಿಂದ ಎಲ್ಲಾ ಮನೆಯವರು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಕೋರಲಾಯಿತು. ಶಂಕರಪಂಚಮಿ, ರಾಮನವಮಿ ಪ್ರಯುಕ್ತ ಬೆಳೆ ಸಮರ್ಪಣೆ ಮಾಡುವ ಮಾಹಿತಿ ನೀಡಲಾಯಿತು. ಲಕ್ಷ್ಮೀ ಲಕ್ಷಣದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಸೇರಿಸಲು ತೀರ್ಮಾನಿಸಲಾಯಿತು. ಘಟಕಾಧ್ಯಕ್ಷರು ಸಭೆಗಳ ವರದಿ ನೀಡಿದರು. ಎಲ್ಲಾ ಘಟಕಗಳಲ್ಲಿಯೂ ನಿರಂತರವಾಗಿ ಘಟಕ ಸಭೆ ಜರಗಿಸುವ ಅನಿವಾರ್ಯತೆಯ ಬಗ್ಗೆ ವಿವರಿಸಲಾಯಿತು.
ದೀಪಕಾಣಿಕೆ, ಬೆಳೆಸಮರ್ಪಣಗಳ ಮಾಹಿತಿಗಳನ್ನು ಗುರಿಕ್ಕಾರರಿಂದ ಪಡೆದುಕೊಳ್ಳಲಾಯಿತು. ಬಜಕೂಡ್ಳು ಅಮೃತಧಾರಾ ಗೋಶಾಲೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರಗಲಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಲೋಚಿಸಲಾಯಿತು. ಫೆಬ್ರವರಿ 17ರಂದು ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು ಭಾಗವಹಿಸುವಂತೆ ತಿಳಿಸಲಾಯಿತು. ಶ್ರೀ ಗುರುಪೀಠದಿಂದ ಬಂದ ವಿಶೇಷ ಸುತ್ತೋಲೆಯನ್ನು ವಾಚಿಸಲಾಯಿತು. ಮಾ. 1 ರಂದು ಭಾನ್ಕುಳಿ ಗೋಸ್ವರ್ಗದಲ್ಲಿ ಜರಗುವ ಸರ್ವಸೇವಕ ಸಮಾವೇಶದ ಕುರಿತು ವಿವರ ತಿಳಿಸಲಾಯಿತು. ಮಂಡಲ ಸಹಾಯ ವಿಭಾಗ ಪ್ರಧಾನ ಸರಳಿ ಮಹೇಶ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಗುರಿಕ್ಕಾರರು, ಪದಾಧಿಕಾರಿಗಳು, ಶ್ರೀಕಾರ್ಯಕರ್ತರು ಉಪಸ್ಥಿತರಿದ್ದರು.