ಮಂಜೇಶ್ವರ: ತಲಪಾಡಿ ಟೋಲ್ ಸ್ಥಳೀಯ ನಾಗರಿಕರಿಗೆ ಮತ್ತು ವಾಹನ ಚಾಲಕ ಮಾಲಕರುಗಳಿಗೆ ಶಾಪವಾಗಿ ಪರಿವರ್ತನೆಯಾಗಿದೆ. ಟೋಲ್ ಸಮಸ್ಯೆಯಿಂದ ಖಾಸಗಿ ಬಸ್ ಗಳು ಟೋಲ್ ದಾಟಿ ಕೇರಳ ಭಾಗಕ್ಕೆ ಬಾರದೆ ಇರುವುದರಿಂದ ನಿತ್ಯ ಪ್ರಯಾಣಿಕರು, ವಿದ್ಯಾರ್ಥಿಗಳು, ರೋಗಿಗಳು, ಉದ್ಯೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಇಂತಹ ಬೇಜವಾಬ್ದಾರಿ ವಿರುದ್ಧ ಟೋಲ್ ನಿರ್ವಾಹಕರು ಪರಿಹಾರ ಕಾಣಬೇಕೆಂದು ಬಿಜೆಪಿ ಆಗ್ರಹಿಸಿದೆ.
ಮಂಜೇಶ್ವರ ಭಾಗದ ಸ್ಥಳೀಯರಿಗೆ ಉಚಿತ ಪಾಸ್ ಮುಂದುವರಿಸಬೇಕು ಹಾಗೂ ಫಾಸ್ಟ್ ಟ್ಯಾಗ್ ಸಮಸ್ಯೆ ಶೀಘ್ರವಾಗಿ ಪರಿಹರಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ನಿರ್ದೇಶಕ ರಮೇಶ್ ಬಾಬು ಹಾಗೂ ನವಯುಗ ಅಧಿಕಾರಿಗಳನ್ನು ಭಾನುವಾರ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ. ಕೆ.ಶ್ರೀಕಾಂತ್ ನೇತೃತ್ವದ ನಿಯೋಗ ಭೇಟಿಯಾಗಿ ಚರ್ಚಿಸಿ ಬೇಡಿಕೆ ಮುಂದಿಟ್ಟಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ ಬಿಜೆಪಿ ಸ್ಥಳೀಯರ ಬೆಂಬಲದೊಂದಿಗೆ ಹೋರಾಟ ಮಾಡಲಿದೆ ಎಂದು ಶ್ರೀಕಾಂತ ಎಚ್ಚರಿಸಿದರು.
ಗಡಿ ಭಾಗದಲ್ಲಿರುವ ಟೋಲ್ ನಲ್ಲಿ ಅಧಿಕಾರಿಗಳು ಕೇರಳ, ಕರ್ನಾಟಕ ಎಂಬ ಬೇಧಭಾವ ತೋರುವುದು ಖಂಡನೀಯ ಎಂದು ಶ್ರೀಕಾಂತ ಹೇಳಿದರು. ಮುಖಂಡರಾದ ಹರಿಶ್ಚಂದ್ರ ಮಂಜೇಶ್ವರ, ಆದರ್ಶ್ ಬಿಎಂ, ರಾಜೇಶ್ ತೂಮಿನಾಡ್, ನವೀನ್ ಮಜಲ್, ದೀಕ್ಷಿತ್, ಗೌತಮ್ ಎಂ, ಯಾದವ ಬಡಾಜೆ, ಯಶಪಾಲ್, ಕಿಶನ್ ಕುಲಾಲ್ ಮೊದಲಾದವರು ಜೊತೆಗಿದ್ದರು.