ಕಾಸರಗೋಡು: ಹಾಲು ಅಭಿವೃದ್ಧಿ ಇಲಾಖೆಯ ರಾಜ್ಯ ಕ್ಷೀರ ಸಹಕಾರಿ ಪುರಸ್ಕಾರ ಪಡೆದ ಮಂಜೇಶ್ವರ ಬ್ಲೋಕ್ ಪಂಚಾಯತ್‍ಮಟ್ಟದ ಪೆರ್ಲದ ಕೃಷಿಕ ಅಬೂಬಕ್ಕರ್ ಸಿದ್ಧಿಕ್ ಅವರಿಗೆ ತಿರುವನಂತಪುರಂ ಕನಕಕುನ್ನು ನಿಶಾಗಂಧಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಾಜ್ಯ ಮಟ್ಟದ ಹಾಲು ಉತ್ಪಾದಕರಸಂಗಮ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಲಾಯಿತು.
ಎಣ್ಮಕಜೆ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿರುವ ಅಬೂಬಕ್ಕರ್ ಸಿದ್ದಿಕ್ ಅವರು ಪೆರ್ಲ ಹಾಲು ಉತ್ಪಾದಕರ ಸಂಘದ ಆಡಳಿತ ಸಮಿತಿ ಸದಸ್ಯರೂ ಆಗಿದ್ದಾರೆ. 2017-18 ವರ್ಷದಹಾಲು ಅಭಿವೃದ್ಧಿ ಇಲಾಖೆಯ ರಾಜ್ಯ ಮಟ್ಟದ ಬಂಜರುಭೂಮಿಯಲ್ಲಿ ಮೇವಿನ ಹುಲ್ಲು ಬೆಳೆಸಿ ಸಾಧನೆ ನಡೆಸಿದ ಬಗ್ಗೆ ಪ್ರಶಸ್ತಿ ಜತೆಗೆ ಈ ವರ್ಷದ ರಾಜ್ಯ ಮಟ್ಟದ ಹಾಲು ಉತ್ಪಾದಕರ ಕಲ್ಯಾಣನಿಧಿ ಪ್ರಶಸ್ತಿಯನ್ನೂ ಇವರು ಗಳಿಸಿದ್ದರು. 100 ಹಸುಗಳು, 50 ಕರುಗಳು, 25 ಇತರ ಜಾನುವಾರುಗಳು ಇರುವ ಡೈರಿ ಫಾರಂ ನಿಂದ ಕಳೆದ ವರ್ಷ 3,25,000 ಲೀಟರ್ ಹಾಲನ್ನು ಉತ್ಪಾದಿಸಿದ್ದರು. 2,92,629ಲೀಟರ್ ಹಾಲು ಪೆರ್ಲ ಹಾಲು ಉತ್ಪಾದಕರ ಸಂಘದಲ್ಲಿ ಅಳತೆ ಮಾಡಲಾಗಿತ್ತು. ಖಂಡಿಗೆ ಫೀಡ್ಸ್‍ಎಂ ಹೆಸರಿನ ಪಶು ಆಹಾರಉತ್ಪಾದನೆಯ ಸಂಸ್ಥೆಯನ್ನೂ ಇವರು ಹೊಂದಿದ್ದಾರೆ.