ಭೋಪಾಲ್: ಶಾಸಕರ, ಸಂಸದರ ಹಾಗೂ ಉನ್ನತ ಅಧಿಕಾರಿಗಳ ಮಕ್ಕಳಿಗೆ ನೀಡಲಾಗುತ್ತಿರುವ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸುವಂತೆ ಕೋರಿ ಮಧ್ಯ ಪ್ರದೇಶದ, ಪರಿಶಿಷ್ಟ ಜಾತಿ(ಎಸ್ ಸಿ)ಗೆ ಸೇರಿದ ಕಾನೂನು ವಿದ್ಯಾರ್ಥಿಯೊಬ್ಬರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.
ನೀಮುಚ್ ಜಿಲ್ಲೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿ ವಿಕ್ರಮ್ ಕುಮಾರ್ ಬಗಡೆ ಅವರು ಈ ಪಿಐಎಲ್ ಸಲ್ಲಿಸಿದ್ದು, ತಾನು ಗ್ರೂಪ್ ಡಿ ನೌಕರನ ಮಗನಾದರೂ ಸಹ ಕಾಲೇಜ್ ನಲ್ಲಿ ಎಸ್ ಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್ಸಿ ಮತ್ತು ಎಸ್ಟಿ ಮೀಸಲಾತಿಯ ಲಾಭವನ್ನು ಶೇ.20ರಷ್ಟು ಮಾತ್ರ ಅಗತ್ಯ ಇರುವವರು ಪಡೆಯುತ್ತಿದ್ದಾರೆ. ಉಳಿದ ಶೇ. 80 ರಷ್ಟು ಮೀಸಲಾತಿಯನ್ನು ಅಗತ್ಯ ಇಲ್ಲದವರು ಪಡೆಯುತ್ತಿದ್ದಾರೆ. ಹೀಗಾಗಿ ಶಾಸಕರು, ಸಂಸದರು ಹಾಗೂ ಉನ್ನತ ಅಧಿಕಾರಿಗಳ ಮಕ್ಕಳ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.ಬಗಡೆ ಅವರು ಜನವರಿ 21ರಂದು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದು, ಫೆಬ್ರವರಿ 2 ರಂದು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಗಡೆ ಅವರು, ನನ್ನ ಅರ್ಜಿ ವಿಚಾರಣೆಗೆ ಸ್ವೀಕರಿಸಿದ್ದು ಸ್ವಾಗತಾರ್ಹ. ಮುಂದಿನ ತಿಂಗಳು ನನ್ನ ಅರ್ಜಿ ವಿಚಾರಣೆಗೆ ಬರುವ ವಿಶ್ವಾಸವಿದೆ. ಈ ವಿಚಾರದಲ್ಲಿ ಸ್ವತಃ ನಾನೇ ಕೋರ್ಟ್ ನಲ್ಲಿ ವಾದ ಮಂಡಿಸುತ್ತೇನೆ ಎಂದು ಹೇಳಿದ್ದಾರೆ.ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಯಲ್ಲಿ ನನ್ನ ಹಾಗೆ ಶಾಸಕರ, ಸಂಸದರ ಹಾಗೂ ಗ್ರೇಡ್ 1 ಸರ್ಕಾರಿ ಅಧಿಕಾರಿಗಳ ಮಕ್ಕಳು ಸಹ ಎಸ್ಸಿ ಮತ್ತು ಎಸ್ಟಿ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ಶಾಸಕರ, ಸಂಸದರ ಹಾಗೂ ಉನ್ನತ ಅಧಿಕಾರಿಗಳ ಮಕ್ಕಳು ಉತ್ತಮ ಕೋಚಿಂಗ್ ಸೆಂಟರ್ ಗಳಿಂದ ತರಬೇತಿ ಪಡೆದು ಬಡವರಿಗೆ ಸಿಗಬೇಕಾದ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಆದರೆ ಬಡವ ವರ್ಗದ ವಿದ್ಯಾರ್ಥಿಗಳು ತರಬೇತಿ ಇಲ್ಲದೆ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಬಗಡೆ ತಿಳಿಸಿದ್ದಾರೆ.
"ರಾಜಕಾರಣಿಗೆ ಚುನಾವಣೆಗೆ ಸ್ಪರ್ಧಿಸಲು ಮೀಸಲಾತಿ ಸೌಲಭ್ಯಗಳು ಬೇಕಾಗುತ್ತವೆ. ಹೀಗಾಗಿ ಅದನ್ನು ಹಾಗೇ ಬಿಡಬೇಕು. ಆದರೆ ರಾಜಕಾರಣಿಯ ಕುಟುಂಬಕ್ಕೆ ಮೀಸಲಾತಿ ಪ್ರಯೋಜನಗಳನ್ನು ಹಿಂಪಡೆಯಬೇಕು" ಎಂದು ಅವರು ಹೇಳಿದ್ದಾರೆ.